ಬೆಳಗಾವಿ: ಜಿಲ್ಲಾಧಿಕಾರಿಗಳ ಹುಟ್ಟೂರು ಅಂದ್ರೆ ಆ ಗ್ರಾಮದಲ್ಲಿ ಯಾವುದಕ್ಕೂ ತೊಂದರೆ ಇಲ್ಲದೆ ನೆಮ್ಮದಿಯಿಂದ ಜನ ಜೀವನ ಸಾಗುತ್ತದೆ ಎಂಬುದು ವಿಶ್ವಾಸ. ಆದರೆ ತವರು ಜಿಲ್ಲೆಯಲ್ಲೇ ಡಿಸಿಯಾಗಿರುವ ಅವರ ಹುಟ್ಟೂರಿನಲ್ಲಿ ಜನ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.
ಉಸಿರಾಟದ ತೊಂದರೆ, ಜಾನುವಾರುಗಳಿಗೆ ವಿವಿಧ ಕಾಯಿಲೆ, ಸುರಕ್ಷತೆ ಇಲ್ಲದಂತಾದ ನೆಲೆ ನಿಂತ ಜಾಗವದು. ಅಷ್ಟಕ್ಕೂ ಯಾರು ಆ ಜಿಲ್ಲಾಧಿಕಾರಿ? ಅವರ ಹುಟ್ಟೂರಿನಲ್ಲಿ ಗ್ರಾಮಸ್ಥರಿಗೆ ನೆಮ್ಮದಿ ಕಸಿದುಕೊಂಡಿದ್ಯಾರು? ಮನೆ ಮಗನ ವಿರುದ್ಧವೇ ಗ್ರಾಮಸ್ಥರು ಆಕ್ರೋಶ ಹೊರ ಹಾಕ್ತಿರುವುದ್ಯಾಕೆ?
ಬಿರುಕು ಬಿಟ್ಟಿವೆ ಮನೆಯ ಬಹುತೇಕ ಗೋಡೆಗಳು, ಕುಸಿಯುವ ಭೀತಿಯಲ್ಲಿ ಮನೆ ಖಾಲಿ ಮಾಡಿರುವ ಕುಟುಂಬಗಳು. ಜಮೀನುಗಳೆಲ್ಲವೂ ಬೂದಿಮಯ, ಒಣಗುತ್ತಿರುವ ಬೆಳೆ, ಓವರ್ ಲೋಡ್ ಮಾಡಿಕೊಂಡು ಹೋಗ್ತಿರುವ ಟಿಪ್ಪರ್, ಬಿಂದಾಸ್ ಆಗಿ ಕಲ್ಲು ಗಣಿಗಾರಿಕೆ.. ಅಷ್ಟಕ್ಕೂ ಈ ಎಲ್ಲ ಚಿತ್ರಣಗಳು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಕಂಡುಬರುತ್ತವೆ.
ಕಲ್ಲು ಗಣಿಗಾರಿಕೆಗೆ ಬೆಚ್ಚಿ ಬಿದ್ದ ಡಿಸಿ ಹುಟ್ಟೂರಿನ ಜನತೆ ಈ ಗಣಿಕೊಪ್ಪ ಗ್ರಾಮ ಸದ್ಯ ಬೆಳಗಾವಿಯ ಜಿಲ್ಲಾಧಿಕಾರಿಯಾಗಿರುವ ಎಂ.ಜಿ ಹಿರೇಮಠ ಅವರ ಹುಟ್ಟೂರು. ಏಳೆಂಟು ವರ್ಷದಿಂದ ಗ್ರಾಮದ ಸುತ್ತಮುತ್ತಲೂ ದೊಡ್ಡ ಮಟ್ಟದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಬ್ಲಾಸ್ಟಿಂಗ್ ಮಾಡಿ ಕಲ್ಲು ಒಡೆಯುವ ಕೆಲಸ ಮಾಡ್ತಿದ್ದಾರೆ.
ಹತ್ತಕ್ಕೂ ಅಧಿಕ ಕಡೆಗಳಲ್ಲಿ ಕ್ರಷಿಂಗ್:ಗಣಿಕೊಪ್ಪ ಗ್ರಾಮದ ಸುತ್ತಲೂ ಹತ್ತಕ್ಕೂ ಅಧಿಕ ಕಡೆಗಳಲ್ಲಿ ಕ್ರಷಿಂಗ್ ಮಾಡಲಾಗುತ್ತಿದ್ದು, ಇದರಿಂದ ಗ್ರಾಮಕ್ಕೆ, ಜನರಿಗೆ ತೊಂದರೆ ಆಗುತ್ತಿದೆ. ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಈ ಪೈಕಿ 250ಕ್ಕೂ ಅಧಿಕ ಮನೆಗಳು ಬ್ಲಾಸ್ಟಿಂಗ್ನಿಂದಾಗಿ ಬಿರುಕು ಬಿಟ್ಟಿವೆ. 50ಕ್ಕೂ ಅಧಿಕ ಮನೆಗಳಂತೂ ಸಂಪೂರ್ಣವಾಗಿ ಬೀಳುವ ಹಂತಕ್ಕೆ ಬಂದು ತಲುಪಿದ್ದು, ಕೆಲವರು ಮನೆ ತೊರೆದು ಬೇರೆ ಕಡೆ ಜೀವನ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧದ ಕರಾಳತೆ ಬಿಚ್ಚಿಟ್ಟ ವಿಜಯಪುರದ ವಿದ್ಯಾರ್ಥಿನಿ ಸುಚಿತ್ರಾ
ರಾತ್ರಿ ಹಗಲು ಎನ್ನದೇ ಬ್ಲಾಸ್ಟಿಂಗ್ ಮಾಡ್ತಿರುವ ಕಾರಣ ದೂಳು ಮತ್ತು ಕೆಮಿಕಲ್ ಮಿಕ್ಸ್ ಆಗಿ ಒಮ್ಮೆಲೆ ಹೊರಗೆ ಬರುತ್ತೆ. ಆ ಸಂದರ್ಭದಲ್ಲಂತೂ ಉಸಿರಾಡುವುದೇ ಕಷ್ಟ ಆಗ್ತಿದೆಯಂತೆ. ಇತ್ತ ಹೇಳದೆ ಕೇಳದೆ ಬ್ಲಾಸ್ಟಿಂಗ್ ಮಾಡುವ ಕಾರಣಕ್ಕೆ ಕಲ್ಲು ಕ್ವಾರಿಯ ಸುತ್ತಲು ಜಮೀನುಗಳಲ್ಲಿ ವ್ಯವಸಾಯ ಮಾಡುವ ರೈತರಿಗೂ ಜೀವ ಭಯ ಕಾಡುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ದೂಳು ಮತ್ತು ಸಣ್ಣನೆಯ ಪುಡಿ ಬಂದು ಕೂರುವುದರಿಂದ ಬೆಳೆಗಳೆಲ್ಲವೂ ಹಾಳಾಗುತ್ತಿದೆ. ಜಾನುವಾರುಗಳು ತಿನ್ನುವ ಮೇವಿನ ಮೇಲೆಯೂ ಕಲ್ಲಿನ ಪುಡಿ ಬಂದು ಬೀಳುತ್ತಿದ್ದು, ಇದು ಜಾನುವಾರುಗಳ ಆರೋಗ್ಯ ಮೇಲೆಯೂ ತೊಂದರೆ ಆಗುತ್ತಿದೆ.
ಈ ವಿಚಾರದ ಬಗ್ಗೆ ಡಿಸಿ ಎಂ.ಜಿ ಹಿರೇಮಠ ಅವರನ್ನು ವಿಚಾರಿಸಿದರೆ, ಕೆಲವು ಮನೆಗಳು ಬಿರುಕು ಬಿಟ್ಟಿರುವ ವಿಚಾರ ಗೊತ್ತಾಗಿದೆ. ತಹಶೀಲ್ದಾರ್, ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸರ್ವೆ ಮಾಡಲು ಸೂಚನೆ ನೀಡಿದ್ದೇನೆ. ಇದರಲ್ಲಿ ಕ್ರಷಿಂಗ್ ಮಾಲೀಕರ ತಪ್ಪು ಕಂಡುಬಂದ್ರೆ ಅವರ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿದರು.