ಬೆಳಗಾವಿ: ಗಡಿ ವಿವಾದ ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗುಬಾಣವಾಗುತ್ತಿದೆ. ಜತ್ತ ಬಳಿಕ ಈಗ ಅಕ್ಕಲಕೋಟ ತಾಲೂಕಿನ 40 ಗ್ರಾಮಗಳ ಜನರು ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ನೆಲದಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.
ಅಕ್ಕಲಕೋಟೆ ತಾಲೂಕಿನ 40 ಹಳ್ಳಿ ಗ್ರಾಮಸ್ಥರು: ಕರ್ನಾಟಕ ಸೇರುವ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯಿಸಲು ಅಕ್ಕಲಕೋಟ ತಾಲೂಕಿನ ಕನ್ನಡ ಭಾಷಿಕರು ನಿರ್ಧರಿಸಿದ್ದಾರೆ. ಅಕ್ಕಲಕೋಟ ತಾಲೂಕಿನ 40 ಹಳ್ಳಿಯ ಕನ್ನಡಿಗರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರುತ್ತೇವೆ. 5 ದಶಕಗಳಿಂದ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ಕುಡಿಯುವ ನೀರು, ಸುಸಜ್ಜಿತ ರಸ್ತೆ, ಕನ್ನಡ ಶಾಲೆಗಳು ಸೇರಿ ಮೂಲಸೌಕರ್ಯಗಳನ್ನು ಒದಗಿಸುತ್ತಿಲ್ಲ. ಕನ್ನಡ ಮಾಧ್ಯಮದ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರ ಕನ್ನಡದ ಪಠ್ಯ ಕೊಡುತ್ತಿಲ್ಲ. ಮಹಾರಾಷ್ಟ್ರದ ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿ ರೋಸಿ ಹೋಗಿದ್ದೇವೆ ಎಂದು ಕನ್ನಡ ಭಾಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.