ಚಿಕ್ಕೋಡಿ :2019-20ನೇ ಸಾಲಿನ ಹಾಗೂ ಪ್ರಸಕ್ತ ವರ್ಷದಲ್ಲಿ ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿರುವ ಚಿಕ್ಕೋಡಿ ಉಪವಿಭಾಗದ ಗ್ರಾಮಗಳ ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ.
ಆದರೆ, ಜನರ ಸಮಸ್ಯೆಗೆ ಧ್ವನಿ ಆಗಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಸಂತ್ರಸ್ತರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಹೀಗಾಗಿ, ಕಳೆದ ಎರಡು ವರ್ಷಗಳಿಂದ ಸರ್ಕಾರದ ನೆರೆ ಪರಿಹಾರ ಸಿಗದೇ ಜನರು ದೇವಸ್ಥಾನಗಳಲ್ಲಿ ಉಳಿದುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಜಿಲ್ಲೆಯ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಕೃಷ್ಣಾ ನದಿ ತೀರದ ಗ್ರಾಮಗಳಾದ ಜುಗುಳ, ಮಂಗಾವತಿ, ಶಹಾಪುರ, ಮಳವಾಡ ಸೇರಿ ಚಿಕ್ಕೋಡಿ ಉಪವಿಭಾಗದಲ್ಲಿರುವ ಇತರ ಗ್ರಾಮಸ್ಥರು ಕೃಷ್ಣಾ ನದಿ ನೀರಿನ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.
ಈ ವರ್ಷ ಪ್ರವಾಹ ಬಂದು ಮೂರು-ನಾಲ್ಕು ತಿಂಗಳು ಕಳೆದರೂ ನೆರೆ ಸಂತ್ರಸ್ತರಿಗೆ ಪುಡಿಗಾಸು ಪರಿಹಾರ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಿಂದ ಕೃಷ್ಣಾ ನದಿ ತೀರದ ಜನತೆ ಪ್ರವಾಹವನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಸಂತ್ರಸ್ತರ ಗೋಳನ್ನ ಯಾರೊಬ್ಬರೂ ಕೇಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಗವಾಡ ತಾಲೂಕಿನ ಜುಗಳ್ ಗ್ರಾಮದ ಅಳಿವಿನಂಚಿನಲ್ಲಿರುವ ಗ್ರಾಮ ದೇವಿ ದೇವಸ್ಥಾನವೊಂದರಲ್ಲಿ ಕೃಷ್ಣಾ ನದಿ ನೀರಿನ ಪ್ರವಾಹದ ಹೊಡೆತಕ್ಕೆ ಕಳೆದ ಮೂರು ವರ್ಷಗಳ ಹಿಂದೆ ಮನೆಗಳನ್ನು ಕಳೆದುಕೊಂಡು ನಾಲ್ಕೈದು ಕುಟುಂಬಗಳು ಜೀವನ ನಡೆಸುತ್ತಿವೆ. ಹೀಗಿದ್ದರೂ ಸಂಬಂಧಿಸಿದ ಯಾವೊಬ್ಬ ಅಧಿಕಾರಿಗಳು ಬಂದು ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಧ್ವನಿಯಾಗಿಲ್ಲ ಎಂಬ ಆರೋಪವಿದೆ.
ಮನೆಗಳನ್ನು ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ವಿನಾಕಾರಣ ಕಾಗದ ಪತ್ರಗಳು ಸರಿ ಇಲ್ಲ ಅಂತಾ ಕಚೇರಿಯಿಂದ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪ್ರವಾಹಕ್ಕೆ ಮನೆಗಳನ್ನು ಕಳೆದುಕೊಂಡಿದ್ದೇವೆ ಪರಿಹಾರ ಕೊಡಿ
ಪ್ರವಾಹ ಬಂದಾಗ ಮನೆಗಳನ್ನು ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಈವರೆಗೂ ಒಂದಿಷ್ಟು ಪರಿಹಾರ ಬಂದಿಲ್ಲ. ಮನೆ ಮಂಜೂರು ಮಾಡುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಲಾಗಿನ್ ಇದ್ದರೂ ಮನೆಗಳ ಮಂಜೂರಾತಿಗೆ ತಾಲೂಕಾಡಳಿತ ಮುಂದಾಗಿಲ್ಲ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ. ಅಲ್ಲದೆ, ಇನ್ನಾದರೂ ರಾಜ್ಯ ಸರ್ಕಾರ ನಮಗೆ ಪರಿಹಾರ ಕೊಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.