ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಬೆಳಗಾವಿ:ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ. ದೇಶದ ರಕ್ಷಣೆ, ಅಭಿವೃದ್ಧಿಯ ಗ್ಯಾರಂಟಿ ಬೇಕಿದೆ. ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬುದನ್ನು ಮೂರು ರಾಜ್ಯಗಳ ಜನತೆ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರ ಉತ್ಸಾಹ ನೋಡಿದರೆ ನಿಮಗೇ ಗೊತ್ತಾಗುತ್ತೆ. ಈ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆಗಳನ್ನು ಜನರು ನಂಬಲಿಲ್ಲ. ಲೋಕಸಭಾ ಚುನಾವಣೆಯನ್ನು ಬಿಜೆಪಿ ದೇಶ ಮತ್ತು ರಾಜ್ಯದಲ್ಲಿ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹೆಬ್ಬಾಗಿಲು ಬೆಳಗಾವಿ: ಈ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬೆಳಗಾವಿಯ ವಿಧಾನಸೌಧವನ್ನು ಯಡಿಯೂರಪ್ಪನವರು ಕಟ್ಟಿದ್ದರು. ಉತ್ತರ ಕರ್ನಾಟಕ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ರಾಜ್ಯದಲ್ಲಿ ಸದ್ಯ ಬರ ಇದೆ. ಕಬ್ಬು ಬೆಳೆಗಾರರು ಕೂಡ ಸಿಹಿ ಸುದ್ದಿ ಸಿಗುತ್ತಾ ಅಂತ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಉತ್ತರ ಕರ್ನಾಟಕ ಮತ್ತು ರಾಜ್ಯದ ಜನರಿಗೆ ಸಿಹಿ ಸುದ್ದಿ ಕೊಡುತ್ತಾರೆ ಅಂತ ಜನ ಮತ್ತು ನಾವು ಕೂಡ ನಿರೀಕ್ಷೆಯಲ್ಲಿದ್ದೇವೆ. ವಿರೋಧ ಪಕ್ಷಗಳಾಗಿ ನಾವು ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದಿಂದ ಉತ್ತರ ಪಡೆಯುವ ಕೆಲಸ ಮಾಡುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ:ಉತ್ತರ ಕರ್ನಾಟಕ ಮತ್ತು ರಾಜ್ಯದ ಸಮಗ್ರ ವಿಚಾರಗಳ ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಇವತ್ತಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಹತ್ತು ದಿನದವರೆಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಚುನಾವಣಾ ಫಲಿತಾಂಶ ವಿಚಾರ: ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಇಲ್ಲದೆ ಇರುವುದರಿಂದ ನಮಗೆ ಅಷ್ಟೊಂದು ನಿರೀಕ್ಷೆ ಇರಲಿಲ್ಲ. ಬಿಜೆಪಿಯವರ ಹತ್ರ ಸಂಪನ್ಮೂಲಗಳಿವೆ. ಧರ್ಮದ ಆಧಾರ ಮೇಲೆ ಚುನಾವಣೆ ಮಾಡಿದ್ದಾರೆ. ಜನರಿಗೆ ಸುಳ್ಳುಗಳು ತುಂಬಾ ಇಂಪಾಗಿ ಕೇಳಿಸುತ್ತವೆ. ಮೇಲಿನಿಂದ ಹಿಡಿದು ಕೆಳಗಿನವರೆಗೆ ಸುಳ್ಳು ಹೇಳುವುದನ್ನು ಬಿಜೆಪಿಯವರು ಚೆನ್ನಾಗಿ ಕಲಿತಿದ್ದಾರೆ. ಇದರಿಂದ ಅವರಿಗೆ ಜಯ ಸಿಕ್ಕಿದೆ ಅಷ್ಟೇ. ಯಾವತ್ತಿದ್ದರೂ ಸತ್ಯಕ್ಕೆ ಜಯ ಸಿಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ರೂಪಿಸದೇ ಇದ್ದರೂ ನಾವು ಅಧಿಕಾರಕ್ಕೆ ಬರುತ್ತಿದ್ದೆವು. ಇಲ್ಲಿನ ಜನರು ಬೇಸತ್ತಿದ್ದರು. ಅದೇ ರೀತಿ ತೆಲಂಗಾಣ ರಾಜ್ಯದಲ್ಲೂ ಕೂಡ ಟಿಆರ್‌ಎಸ್ ರಾಜಕೀಯ ಪಕ್ಷದಿಂದ ಜನತೆ ಬೇಸತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕಿಂತಲೂ ಹೆಚ್ಚು ಅಲ್ಲಿನ ಸ್ಥಳೀಯ ಪಕ್ಷ ಗ್ಯಾರಂಟಿಗಳ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ಮೇಲೆ ಭರವಸೆ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆ ಬೇರೆಯೆ ಎಂದು ಅವರು ಹೇಳಿದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಬಿಆರ್ಎಸ್ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ