ಕರ್ನಾಟಕ

karnataka

ETV Bharat / state

Crab: ಬೆಳಗಾವಿಯಲ್ಲಿ ಏಡಿ ಖರೀದಿಗೆ ಮುಗಿಬಿದ್ದ ಜನರು; ಏಡಿ ಆರೋಗ್ಯಕ್ಕೆ ಒಳ್ಳೆಯದೇ? ನ್ಯೂಟ್ರಿಶಿಯನ್​ ಹೇಳುವುದೇನು?

Nutritionists on Crab: ಮಳೆಗಾಲವಾದ್ದರಿಂದ ಬೆಳಗಾವಿಯಲ್ಲಿ ಏಡಿ ವ್ಯಾಪಾರ ಹೆಚ್ಚಾಗಿದೆ. ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದಾರೆ. ಏಡಿ ಸೇವನೆಯಿಂದ ಆರೋಗ್ಯಕ್ಕೇನು ಲಾಭ?. ಮಾರಾಟಗಾರರು, ಗ್ರಾಹಕರು ಹಾಗು ನ್ಯೂಟ್ರಿಶಿಯನ್‌ ಮಾತುಗಳು ಇಲ್ಲಿವೆ.

Etv Bharat
Etv Bharat

By

Published : Aug 13, 2023, 6:26 PM IST

ಏಡಿ ಸೇವನೆ: ಹೇಳಿಕೆಗಳು

ಬೆಳಗಾವಿ :ಕುಂದಾನಗರಿ ಬೆಳಗಾವಿಯಲ್ಲಿ ಏಡಿಗಳ ಮಾರಾಟ ಬಿರುಸಾಗಿದೆ. ಮಳೆ ಹಿನ್ನೆಲೆಯಲ್ಲಿ ಏಡಿಗಳ ಮಾರಾಟ ನಡೆಯುತ್ತಿದ್ದು, ಗ್ರಾಹಕರು ಮುಗಿಬೀಳುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನಗರದ ಕ್ಯಾಂಪ್​ ಪ್ರದೇಶದಲ್ಲಿನ ಏಡಿ ಖರೀದಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಸಾಗುತ್ತಿದೆ.

ಕ್ಯಾಂಪ್ ಪ್ರದೇಶ, ಖಾಸಬಾಗ, ಕಸಾಯಿಗಲ್ಲಿ ಸೇರಿದಂತೆ ನಗರದ ಹಲವೆಡೆ ಮಾರಾಟ ನಡೆಯುತ್ತಿದೆ. ಬೆಳಗಾವಿ ನಗರ ಸೇರಿ ಸುತ್ತಲಿನ ಹಳ್ಳಿಗಳಿಂದಲೂ ಆಗಮಿಸುತ್ತಿರುವ ಜನ ದುಂಬಾಲು ಬಿದ್ದು ಏಡಿ ಖರೀದಿಸುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಏಡಿ ಮಾರಾಟ ನಡೆಯುತ್ತಿದ್ದು, ಹಿಡಕಲ್ ಜಲಾಶಯ, ಕೃಷ್ಣಾ, ಘಟಪ್ರಭಾ, ಮಾರ್ಕಂಡೇಯ ನದಿ ಸೇರಿ ಹಳ್ಳ-ಕೊಳ್ಳಗಳಲ್ಲಿ ಏಡಿಗಳನ್ನು ಹಿಡಿದು ತಂದು ಸೇಲ್ ಮಾಡಲಾಗುತ್ತಿದೆ.

ಕ್ಯಾಂಪ್ ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಏಡಿ ವ್ಯಾಪಾರಸ್ಥರಿದ್ದು, ಪ್ರತಿನಿತ್ಯ 2ರಿಂದ 3 ಸಾವಿರ ರೂ. ವರೆಗೆ ಏಡಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಣ್ಣ ಏಡಿಗಳಿದ್ದರೆ ಜೋಡಿಗೆ 80ರಿಂದ 100 ರೂ., ದೊಡ್ಡ ಏಡಿಗಳಿಗೆ ಜೋಡಿಗೆ 120ರಿಂದ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ.‌ ಬೆಳಗಾವಿಯಲ್ಲಿ ಪ್ರತಿ ದಿನ ಅಂದಾಜು 7-8 ಟನ್ ವಹಿವಾಟು ನಡೆಯುತ್ತಿದೆ. ಬೆಳಗಾವಿ ಮಾರುಕಟ್ಟೆಗೆ ಪಕ್ಕದ ಮಹಾರಾಷ್ಟ್ರದ ಚಂದಗಢದಿಂದಲೂ ಏಡಿಗಳು ಬರುತ್ತಿದ್ದು, ಗೋಣಿ ಚೀಲದಲ್ಲಿ ಹಿಡಿದುಕೊಂಡು ಬರುವ ವ್ಯಾಪಾರಿಗಳು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.

ವ್ಯಾಪಾರಿ ದಾನೇಶ್ ಮಾತನಾಡಿ​, "ಅನೇಕ ವರ್ಷಗಳಿಂದ ನಾವು ಏಡಿ ಮಾರಾಟ ಮಾಡುತ್ತಿದ್ದೇವೆ. ಇದು ನಮ್ಮ ಕುಲಕಸುಬು. ಮಳೆಗಾಲದ ಎರಡು ತಿಂಗಳು ಮಾತ್ರ ಏಡಿ ಮಾರಾಟ ಮಾಡಲಾಗುತ್ತದೆ. ಏಡಿ ರಸ ಮಾಡಿ ಕುಡಿದರೆ ಕೆಮ್ಮು, ನೆಗಡಿ, ಶೀತ ಸೇರಿ ಇನ್ನಿತರ ರೋಗಗಳು ನಿವಾರಣೆಯಾಗುತ್ತವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಬಹಳಷ್ಟು ಮಂದಿ ಖರೀದಿಸುತ್ತಿದ್ದಾರೆ. ನಮ್ಮಲ್ಲಿ ದೊಡ್ಡ ಏಡಿಗಳಿಗೆ 150 ರೂ.‌ಇದೆ" ಎಂದರು.

"ಏಡಿ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಲಭ್ಯವಾಗುತ್ತದೆ. ಜೋಡಿಗೆ 100 ರೂ.ನಂತೆ 10 ಜೋಡಿ ಖರೀದಿ ಮಾಡಿದ್ದೇನೆ" ಎಂದು ಗ್ರಾಹಕ ಜಗದೀಶ ಹೇಳಿದರು.

ನ್ಯೂಟ್ರಿಶಿಯನ್ ಹೇಳುವುದೇನು?: ಏಡಿ ತಿನ್ನುವ ಬಗ್ಗೆ ಪ್ರತಿಕ್ರಿಯಿಸಿರುವ ವೆಲ್‌ನೆಸ್ ನ್ಯೂಟ್ರಿಶಿಯನ್ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಡಾ.ಸಿದ್ದಾರ್ಥ ನಿನ್ನೇಕರ್​, "ಏಡಿಯಲ್ಲಿ ಗುಣಮಟ್ಟದ ಪ್ರೊಟೀನ್, ಜೀರೋ ಕಾರ್ಬೋಹೈಡ್ರೇಟ್, ಕಡಿಮೆ ಕ್ಯಾಲೋರಿ ಇರುವುದರಿಂದ ದೇಹದ ತೂಕ ಕಡಿಮೆ ಮಾಡುತ್ತದೆ. ಏಡಿಯಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ಕ್ಯಾಲ್ಸಿಯಮ್, ವಿಟಮಿನ್-ಡಿ, ಪಾಸ್ಪರಸ್ ಖನಿಜಗಳು ಇರುವುದರಿಂದ ಎಲುಬುಗಳನ್ನು ಗಟ್ಟಿಯಾಗಿಸುತ್ತದೆ. ಬೆನ್ನು, ಮಂಡಿ ಸೇರಿ ಇನ್ನಿತರ ಮೂಳೆಗಳ ಸವೆತ ಮತ್ತು ನೋವುಗಳನ್ನು ನಿವಾರಿಸುತ್ತದೆ".

"ಏಡಿಯಲ್ಲಿ ಒಮೇಗಾ-3 ಮತ್ತು ಬಿ12 ಅಂಶ ಇರುವುದರಿಂದ ಕೈಕಾಲುಗಳ ನಿಶ್ಯಕ್ತಿ, ನರಗಳು ಮತ್ತು ಮೆದುಳಿನ ದೌರ್ಬಲ್ಯಗಳನ್ನು ನಿವಾರಿಸುತ್ತದೆ. ಅದೇ ರೀತಿ ಕೆಟ್ಟ ಕೊಬ್ಬು ಕಡಿಮೆ ಮಾಡಿ ಹೃದಯದ ಕಾಯಿಲೆಯನ್ನೂ ದೂರ ಮಾಡುತ್ತದೆ. ಏಕಾಗ್ರತೆ ಮತ್ತು ಮಾನಸಿಕ ಆರೋಗ್ಯವನ್ನೂ ಹೆಚ್ಚಿಸುತ್ತದೆ. ವಿಟಮಿನ್ ಬಿ2, ಬಿ6 ಚರ್ಮ ರೋಗಗಳ ನಿವಾರಣೆಗೆ ಸಹಕಾರಿಯಾಗುತ್ತವೆ. ಹಾಗಾಗಿ ಏಡಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಎಲ್ಲ ಪೌಷ್ಠಿಕಾಂಶಗಳು ಇರುವುದರಿಂದ ಇದು ಸರ್ವ ರೋಗಕ್ಕೂ ರಾಮಬಾಣ" ಎಂದು ವಿವರಿಸಿದರು.

ಇದನ್ನೂ ಓದಿ :Monsoon: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಳೆ ಮಾಯ! ರೈತರಲ್ಲಿ ಆತಂಕ

ABOUT THE AUTHOR

...view details