ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಹೆಚ್ಚಾಗಿ ಒಣ ಬೇಸಾಯ ಹೊಂದಿರುವ ಭೂ ಪ್ರದೇಶವಾಗಿದ್ದು, ನೀರಾವರಿ ಯೋಜನೆಗಳಿಗೆ ಇಲ್ಲಿನ ರೈತರು ಇನ್ನೂ ಪರಿತಪಿಸುತ್ತಿದ್ದಾರೆ. ಇದನ್ನರಿತ ಸರ್ಕಾರ ತಾಲೂಕಿನ ವಿವಿಧ ಭಾಗಗಳ ನೀರಿನ ಮೂಲಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಆದರೆ, ತಾಲೂಕಿನ ಖೋತನಟ್ಟಿ ಗ್ರಾಮದಲ್ಲಿ ಹಿರೇ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಬ್ಯಾರೇಜ್ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರಿಸುಮಾರು 1.10 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿ ಸಣ್ಣ ನೀರಾವರಿ ಇಲಾಖೆ ಮುಖಾಂತರ ನಿರ್ಮಾಣವಾಗುತ್ತಿದೆ. ನಿರ್ಮಾಣ ಹಂತದಲ್ಲೇ ತಳಪಾಯ ಕುಸಿದು ಬೀಳುವ ಸ್ಥಿತಿಯಲ್ಲಿ ನಿರ್ಮಾಣವಾಗಿದೆ, ಕಳಪೆ ಮಟ್ಟದ ಕಾಮಗಾರಿಯಾಗಿದೆ ಎಂದು ಈ ಭಾಗದ ರೈತರು ಆರೋಪಿಸಿ, ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾರೇಜ್ ಕಾಮಗಾರಿ ಕಳಪೆ - ಗ್ರಾಮಸ್ಥರಿಂದ ಆರೋಪ! ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದು ಕೊನೆಗೂ ನಮ್ಮ ಗ್ರಾಮದಲ್ಲಿ ಹಿರೇ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ಬ್ಯಾರೇಜ್ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ. ಆದ್ರೆ ಕಳಪೆ ಮಟ್ಟದ ಕಾಮಗಾರಿ ಕೆಲವೇ ವರ್ಷಗಳಲ್ಲಿ ನೀರಿನ ಹೊಡೆತಕ್ಕೆ ನೆಲಸಮವಾಗುವುದು ಖಡಾ ಖಂಡಿತ ಎನ್ನುವುದು ಗ್ರಾಮಸ್ಥರ ಅಳಲು.
ಸದ್ಯ ನಿರ್ಮಾಣ ಹಂತದಲ್ಲಿರುವ ಬ್ಯಾರೇಜ್ ಅನ್ನು ಕೈಯಿಂದಲೇ ಕೆದರಿದರೆ ಮರಳಿನಂತೆ ಸಿಮೆಂಟ್ ಹೊರ ಬರುತ್ತಿರುವುದನ್ನು ನೋಡಿ ಗ್ರಾಮದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. 2019ರಿಂದ ಪ್ರಾರಂಭವಾದ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ ಹಾಗೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೇ ಇರುವುದರಿಂದ ಇಷ್ಟರ ಮಟ್ಟಿಗೆ ಈ ಕಾಮಗಾರಿ ಕಳಪೆಯಾಗಿ ಕೂಡಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು. ಗುತ್ತಿಗೆದಾರನ ಆಮಿಷಕ್ಕೆ ಒಳಗಾಗಿ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ಮಾಡದೇ ಇರುವುದು ಈ ಕಳಪೆ ಕಾಮಗಾರಿಗೆ ಸಾಕ್ಷಿ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ:ದಾವಣಗೆರೆ: ನೀರಿಗಾಗಿ ಹೋರಾಟಕ್ಕೆ ಸಜ್ಜಾದ ರೈತರು!
ಒಟ್ಟಾರೆ ಸಣ್ಣ ನೀರಾವರಿ ಯೋಜನೆಗಳ ಮುಖಾಂತರ ಕೃಷಿ ವಲಯಗಳಿಗೆ ನೀರಾವರಿ ಒದಗಿಸುವ ಯೋಜನೆ ಅಡಿ ಸರ್ಕಾರ ಹಲವು ಯೋಜನೆಗಳನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಿದೆ. ರಾಜ್ಯ ನಾಯಕರಾದ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಅಥಣಿ ಶಾಸಕ ತವರು ಕ್ಷೇತ್ರದಲ್ಲಿ ಈ ಕಾಮಗಾರಿಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದು, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಅಥಣಿ ಜನತೆ ಆಗ್ರಹಿಸಿದ್ದಾರೆ.