ಬೆಳಗಾವಿ:ಅಯೋಧ್ಯೆ ತೀರ್ಪಿನ ಬಳಿಕ ಹಿಂದೂ ಹಾಗೂ ಮುಸ್ಲಿಂ ಸಂತರು ಸೇರಿ ಸಭೆ ನಡೆಸಿದ್ದು, ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಭೂ ವಿವಾದದ ತೀರ್ಪಿನ ಬಳಿಕ ದೆಹಲಿಯಲ್ಲಿ ಸಾಮರಸ್ಯದ ಸಭೆ ನಡೆಸಲಾಗಿದೆ. ಹಿಂದೂ ಹಾಗೂ ಮುಸ್ಲಿಂ ಸಂತರು ಸೇರಿ ಸಭೆ ನಡೆಸಿ ಕೆಲವು ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಭಯ ಧರ್ಮಿಯರು ಸೌಹಾರ್ದತೆ ಬೆಳೆಸಿಕೊಳ್ಳಬೇಕು. ದೇಶದ ಏಕತೆ ಉಳಿಸಲು ಭಿನ್ನಾಭಿಪ್ರಾಯ ಮರೆಯಬೇಕು. ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಹಿಂದೂ- ಮುಸ್ಲಿಂ ಸಂತರೂ ಸೇರಿಯೇ ಉಭಯ ಧರ್ಮಿಯರಿಗೆ ಸಂದೇಶ ನೀಡಲಾಗಿದ್ದು, ಬೇರೆ, ಬೇರೆ ಧರ್ಮಿಯರಾಗಿದ್ದರೂ ನಾವೆಲ್ಲರೂ ಭಾರತೀಯರು. ಏಕತೆ, ಪರಸ್ಪರ ಹೊಂದಾಣಿಕೆ, ಸಾಮರಸ್ಯದಿಂದ ದೇಶದ ಪ್ರಗತಿಗೆ ಸಹಕಾರ ಕೊಡಬೇಕೆಂದು ನಿರ್ಣಯಿಸಲಾಗಿದೆ. ಅಯೋಧ್ಯೆ ತೀರ್ಪಿನಿಂದ ದೇಶದಲ್ಲಿ ಯಾವುದೇ ಘರ್ಷಣೆ, ಶಾಂತಿಭಂಗ ಆಗಿಲ್ಲ. ಈ ಬೆಳವಣಿಗೆ ಸಂತೋಷದಾಯಕವಾಗಿದೆ ಎಂದರು.
ರಾಜೀನಾಮೆ ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಒಂದು ಪಕ್ಷದಿಂದ ಬಂದ ಮೇಲೆ ಹೊರಗೆ ಬಂದು ಸೇರ್ಪಡೆಗೊಂಡ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬೇಕು. ಒಂದು ಪಕ್ಷದಿಂದ ಗೆದ್ದು ರಾಜೀನಾಮೆ ನೀಡದೆ ಬೇರೆ ಪಕ್ಷದ ಪರವಾಗಿ ಇರಬಾರದು ಎಂದರು.