ಚಿಕ್ಕೋಡಿ:ನರೇಗಾ ಯೋಜನೆಯಡಿ ಬಾವಿ ತೋಡಿಸಿದ ಜಮೀನು ಮಾಲೀಕನ ಬಿಲ್ ಪಾವತಿಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಲಂಚ ಪಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿ ಪಿಡಿಒರನ್ನು ವಜಾ ಮಾಡುವಂತೆ ಜನರಿಂದ ಆಗ್ರಹ ವ್ಯಕ್ತವಾಗಿದೆ.
ಚಿಕ್ಕೋಡಿ ಉಪವಿಭಾಗದ ಮೂಡಲಗಿ ತಾಲೂಕಿನ ತಿಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಪತ್ತಾರ ಎಂಬುವರೇ ಹಣ ಪಡೆಯುತ್ತಿರುವ ಅಧಿಕಾರಿ. ನರೇಗಾ ಕೆಲಸವನ್ನ ಜೆಸಿಬಿ ಮೂಲಕ ಮಾಡಿಸಿ ಕೊಡುತ್ತೇನೆ, ನಂತರ ನಿರ್ಮಾಣವಾದ ಬಾವಿ ತೋರಿಸಿ ಬಿಲ್ ಕೊಡುವುದಾಗಿ ಹೇಳಿ ಪಿಡಿಒ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತನ್ನ ಕೆಲಸ ಮಾಡಿಕೊಡಿ ಎಂದು ಇದೇ ವೇಳೆ ಅಧಿಕಾರಿಯ ಕಾಲುಹಿಡಿದುಕೊಳ್ಳುತ್ತಾನೆ. ಆದರೂ ಕೂಡ ಒಪ್ಪದ ಪಿಡಿಒ ರೈತನಿಂದ ಹಣ ಪಡೆಯುತ್ತಿರುವ ಈ ವಿಡಿಯೋ ವೈರಲ್ ಆಗಿದೆ.
ಅಲ್ಲದೆ, ಪ್ರವಾಹಕ್ಕೆ ನಲುಗಿ ಹಲವೆಡೆ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಂದಲೂ ಪಿಡಿಒ ಶಿವಾನಂದ ಅವರು ರಾಜಾರೋಷವಾಗಿ ಹಣ ಪೀಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.