ಬೆಳಗಾವಿ: ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ನಗರದ ಸುಚಿತ್ವ ಕಾಪಾಡುವ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಹೆಚ್ಚುವರಿ ಕಾರ್ಯಗಳನ್ನು ಪೌರಕಾರ್ಮಿಕರು ನಿಭಾಯಿಸಿದ್ದಾರೆ. ಕಂಟೇನ್ಮೆಂಟ್ ಝೋನ್, ಕ್ವಾರಂಟೈನ್ ಹಾಗೂ ಹೋಟೆಲ್‍ಗಳಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಪೌರಕಾರ್ಮಿಕರೇ ನಿಭಾಯಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಪೌರಕಾರ್ಮಿಕರಿಗೆ ವೇತನ ಪಾವತಿ ಪಾಲಿಕೆಯಿಂದಲೇ ಆರೋಗ್ಯದ ಕಾಳಜಿ:
ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಕೊರೊನಾ ಭೀತಿಯಲ್ಲೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಪ್ರತಿ ಪೌರಕಾರ್ಮಿಕರಿಗೂ ನಿತ್ಯ ಸ್ಯಾನಿಟೈಸರ್, ಮಾಸ್ಕ್, ಫೇಸ್ ಮಾಸ್ಕ್, ಪಿಪಿಇ ಕಿಟ್ ನೀಡಲಾಗಿದೆ. ಅಲ್ಲದೇ ಪ್ರತಿ ಪೌರಕಾರ್ಮಿಕರಿಗೆ ಕೋವಿಡ್ ಟೆಸ್ಟ್ ಸೇರಿದಂತೆ ಇತರ ಆರೋಗ್ಯ ತಪಾಸಣೆಯನ್ನೂ ನಿಯಮಿತವಾಗಿ ಮಾಡಿಸಲಾಗುತ್ತಿದೆ. ಈ ಕಾರಣಕ್ಕೆ ಪೌರಕಾರ್ಮಿಕರು ಕೂಡ ವಾರಿಯರ್ಸ್‍ರಂತೆ ಕೆಲಸ ಮಾಡಿದ್ದಾರೆ. ಮೂರು ತಿಂಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಲು ಕೂಡ ಪಾಲಿಕೆ ನಿರ್ಧರಿಸಿದೆ.
ಬೆಳಗಾವಿಯಲ್ಲಿ 1,256 ಪೌರಕಾರ್ಮಿಕರು:
ಬೆಳಗಾವಿ ಮಹಾನಗರದಲ್ಲಿ 5,49,560 ಜನಸಂಖ್ಯೆಯಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 58 ವಾರ್ಡ್‍ಗಳಿದ್ದು, ಒಟ್ಟು 1,256 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿ ಮಹಾನಗರದಲ್ಲಿ 10 ವಾರ್ಡ್‍ಗಳಲ್ಲಿ ಕಾಯಂ ಪೌರಕಾರ್ಮಿಕರಿದ್ದು, ಉಳಿದ 48 ವಾರ್ಡ್‍ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಿದ್ದಾರೆ. ಮಹಾನಗರದಲ್ಲಿ 157 ಕಾಯಂ ಪೌರಕಾರ್ಮಿಕರು, ಪಾಲಿಕೆಯಿಂದ 548 ಪೌರಕಾರ್ಮಿಕರಿಗೆ ನೇರ ಸಂಬಳ ಪಾವತಿಯಾಗುತ್ತದೆ. ಗುತ್ತಿಗೆ ಆಧಾರದ ಮೇಲೆ 551 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಪಾಲಿಕೆಯಲ್ಲಿ ಒಟ್ಟು 1256 ಪೌರಕಾರ್ಮಿಕರು ನಗರ ಸುಚಿತ್ವದ ಕಾರ್ಯ ಮಾಡುತ್ತಿದ್ದಾರೆ.
ಓದಿ:ಕುಂದಾನಗರಿ ಬೂದಿ ಮುಚ್ಚಿದ ಕೆಂಡ.. ಪುಂಡ ಮರಾಠಿಗರಿಗೆ ಕನ್ನಡಪರ ಸಂಘಟನೆಗಳ ಎಚ್ಚರಿಕೆ..
ತೆರಿಗೆ ಸಂಗ್ರಹದಲ್ಲಿ ಹಿನ್ನಡೆ:
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎರಡು ತಿಂಗಳ ಕಾಲ ಲಾಕ್‍ಡೌನ್ ಹೇರಿತ್ತು. ಹೀಗಾಗಿ ಹಲವು ಉದ್ಯಮಗಳು ನಷ್ಟಕ್ಕೆ ಒಳಗಾಗಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ತೆರಿಗೆ ಪಾವತಿಗೆ ರಿಯಾಯಿತಿ ನೀಡಿದೆ. ಮಹಾನಗರದಲ್ಲಿ ಸಂಗ್ರಹವಾಗುವ ತೆರಿಗೆ ಹಣದಿಂದಲೇ ಪೌರಕಾರ್ಮಿಕರಿಗೆ ಸಂಬಳ ಪಾವತಿಸಲಾಗುತ್ತದೆ. ಆದರೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾದರೂ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಹಾಗೂ ಇತರೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ಹಹಿಸುವ ಸಿಬ್ಬಂದಿಗೆ ವೇತನ ಪಾವತಿ ಮಾಡಲಾಗುತ್ತಿದೆ.