ಚಿಕ್ಕೋಡಿ(ಬೆಳಗಾವಿ):ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ಮತ್ತೆ ಭುಗಿಲೆದ್ದ ಕಾರಣದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ರಾಜ್ಯಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಮತ್ತು ರೋಗಿಗಳು ತೊಂದರೆಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್ ಪೋಸ್ಟ್ ಬಳಿ ಕರ್ನಾಟಕ ಗಡಿವರೆಗೆ ಮಾತ್ರ ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆ ಇದೆ. ನೇರವಾಗಿ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಇಲ್ಲದೇ ಇರುವುದರಿಂದ ರೋಗಿಗಳು ಮತ್ತು ಪ್ರಯಾಣಿಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕರ್ನಾಟಕದ ಗಡಿಯಿಂದ ಮಹಾರಾಷ್ಟ್ರ ಗಡಿವರೆಗೆ ನಡೆದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.
ಬಸ್ ಸಂಚಾರದ ಸಮಸ್ಯೆ ಬಗ್ಗೆ ಪ್ರಯಾಣಿಕರು ಮಾತನಾಡಿದ್ದಾರೆ ಕಳೆದ ಎರಡು ದಿನಗಳಿಂದ ಗಡಿ ವಿಚಾರವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಆದರೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಅಥಣಿ, ಚಿಕ್ಕೋಡಿ ಭಾಗದ ಜನರು ಹೆಚ್ಚಾಗಿ ಮಹಾರಾಷ್ಟ್ರ ಮೀರಜ್ ಸಾಂಗ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ.
ಕರ್ನಾಟಕದಿಂದ ಬಸ್ ಸಂಚಾರ ಬಂದ್: ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ದಿನನಿತ್ಯ 200ಕ್ಕೂ ಹೆಚ್ಚು ಬಸ್ ಸಂಚಾರ ಮಾಡುತ್ತಿದ್ದು, 15 ಲಕ್ಷ ರೂಪಾಯಿ ಆದಾಯ ಆ ಮಾರ್ಗದಿಂದ ಸಾರಿಗೆ ಇಲಾಖೆಗೆ ಸಿಗುತ್ತಿತ್ತು. ಆದರೆ ಮಹಾರಾಷ್ಟ್ರದ ಕೆಲವು ಪುಂಡರು ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ನಿಲ್ಲಿಸಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗೆ ಕಲ್ಲು ತೂರಾಟ; ಬಸ್ ಸಂಚಾರ ಸ್ಥಗಿತ