ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಪಾಸ್‍ಪೋರ್ಟ್ ಅರ್ಜಿದಾರರ ಪೊಲೀಸ್ ಪರಿಶೀಲನೆ ಕಾರ್ಯ ಮೂರೇ ದಿನದೊಳಗೆ ಪೂರ್ಣಗೊಳ್ಳುತ್ತಿದೆ. ತ್ವರಿತಗತಿಯಲ್ಲಿ ಪರಿಶೀಲನೆ ಮಾಡುತ್ತಿರುವ ಪೊಲೀಸರ ಕಾರ್ಯವೀಗ ಬೆಳಗಾವಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಪಾಸ್‍ಪೋರ್ಟ್ ಸಂಬಂಧ ಪೊಲೀಸ್ ಪರಿಶೀಲನೆ ಇಷ್ಟು ತ್ವರಿತಗತಿ ಆಗಲ್ಲ. ಪಾಸ್‍ಪೋರ್ಟ್ ಪರಿಶೀಲನೆ ವಿಚಾರದಲ್ಲಿ ಬೆಳಗಾವಿ ಪೊಲೀಸರ ಕಾರ್ಯ ಇತರೆ ಜಿಲ್ಲೆಗೂ ಮಾದರಿಯಾಗಿದೆ.
ರಾಜ್ಯ ಸರ್ಕಾರದ ಸಕಾಲ ಯೋಜನೆಯಲ್ಲಿ ಪಾಸ್‍ಪೋರ್ಟ್ ಪರಿಶೀಲನೆಗೆ 21 ದಿನ ನಿಗದಿ ಮಾಡಿದೆ. ಆದರೆ, ಮಹಾನಗರ ಪೊಲೀಸರು ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ವೆರಿಫಿಕೇಶನ್ ಪೂರ್ಣಗೊಳಿಸುತ್ತಿದ್ದು, ಪಾಸ್‍ಪೋರ್ಟ್ ಅರ್ಜಿದಾರರ ಖುಷಿಗೆ ಕಾರಣವಾಗಿದೆ.
ಅರ್ಜಿದಾರರ ಮನೆಗೆ ಹೋಗಿ ಪರಿಶೀಲನೆ :ಪಾಸ್‍ಪೋರ್ಟ್ ಪಡೆಯಲು ಇಚ್ಛಿಸುವವರು ನಿಗದಿಪಡಿಸಿದ ದಾಖಲೆಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದಾದ ಎರಡೇ ದಿನಗಳಲ್ಲಿ ಅರ್ಜಿದಾರರ ಅರ್ಜಿ ಮಹಾನಗರ ಪೊಲೀಸರಿಗೆ ರವಾನಿಸಲಾಗುತ್ತದೆ. ಬಳಿಕ ಅರ್ಜಿದಾರ ವಾಸವಿರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ಈ ಅರ್ಜಿ ಕಳುಹಿಸಲಾಗುತ್ತದೆ. ಬಳಿಕ ಆ ಠಾಣೆಯ ಪೊಲೀಸ್ ಸಿಬ್ಬಂದಿ ಅರ್ಜಿದಾರನ ನಿವಾಸಕ್ಕೆ ತೆರಳಿ ಪರಿಶೀಲಿಸುತ್ತಾರೆ.
ತ್ವರಿತವಾಗಿ ನಡೆಯುತ್ತೆ ಸಂಪೂರ್ಣ ಪರಿಶೀಲನೆ :ಅಲ್ಲದೇ ಅರ್ಜಿದಾರನ ನೆರೆಹೊರೆಯವರ ಜೊತೆಗೆ ಚರ್ಚಿಸಿ, ಆತನ ಹಿನ್ನೆಲೆ ಪರಿಶೀಲಿಸುತ್ತಾರೆ. ಈ ಮೊದಲು ಅರ್ಜಿದಾರನ ದಾಖಲೆ ಪರಿಶೀಲಿಸಿ ಇಬ್ಬರು ಸ್ಥಳೀಯರ ಸ್ಟೇಟ್‍ಮೆಂಟ್ ಪಡೆಯಲಾಗುತ್ತಿತ್ತು. ಇದರಿಂದ ಪರಿಶೀಲನೆ ಕಾರ್ಯವೂ ವಿಳಂಬವಾಗುತ್ತಿತ್ತು. ಈಗ ಡಿಜಿಟಲ್ ವ್ಯವಸ್ಥೆ ಜಾರಿಯಾಗಿರುವ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಟ್ಯಾಬ್ ಜೊತೆಗೆ ಅರ್ಜಿದಾರ ವಾಸವಿರುವ ಸ್ಥಳಕ್ಕೆ ಹೋಗುತ್ತಾರೆ.
ಅಲ್ಲಿ ಸ್ಥಳೀಯರ ಜೊತೆಗೆ ವ್ಯಕ್ತಿಯ ನಡುವಳಿಕೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಅರ್ಜಿದಾರ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೋ? ಇಲ್ಲವೋ? ಎಂಬುವುದನ್ನು ಪೊಲೀಸರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಖಾತ್ರಿ ಆದ ಬಳಿಕವೇ ಆಯಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಅರ್ಜಿಯನ್ನು ಮರಳಿ ಪೊಲೀಸ್ ಆಯುಕ್ತರ ಕಚೇರಿಗೆ ಕಳಿಸುತ್ತಾರೆ. ಬಳಿಕ ಈ ಅರ್ಜಿ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.