ಬೆಳಗಾವಿ :ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರಲಿದ್ದು, ಗೊಂದಲದ ಪ್ರಶ್ನೆಯೇ ಇಲ್ಲ. ರಾಜಕೀಯ ಅಂದರೆ ಗೊಂದಲ ಇರಲೇಬೇಕು. ಇರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸಿದ್ದರಾಮಯ್ಯ ಕುರಿತು ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ನಮಗೆ ಸಂಬಂಧಪಟ್ಟ ವಿಚಾರವಲ್ಲ. ಈ ಬಗ್ಗೆ ನನಗೇನು ತಿಳಿದಿಲ್ಲ. ತಮ್ಮ ತಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಲು ಪಕ್ಷದಲ್ಲಿ ಎಲ್ಲರೂ ಸ್ವತಂತ್ರರು. ಆದರೆ, ಮುಂದಿನ ಸಿಎಂ ಯಾರು ಎಂಬುದು ಈಗ ಹೇಳುವುದು ಕಷ್ಟ. ವ್ಯಕ್ತಿ ಪೂಜೆ ಬೇಡ. ಪಕ್ಷ ಪೂಜೆ ಮಾಡಿ ಎಂದು ನಾವು ಕೂಡ ಹೇಳುತ್ತಿದ್ದೇವೆ ಎಂದರು.
ಇದೇ ವೇಳೆ ಕೇವಲ ಬೆಳಗಾವಿ ದಕ್ಷಿಣ ಕ್ಷೇತ್ರವಷ್ಟೇ ನಮ್ಮ ಗುರಿ ಅಲ್ಲ. ಸವದತ್ತಿ, ರಾಯಬಾಗ, ಹಾರೋಗೇರಿ ಎಲ್ಲಾ ಕಡೆಗಳಲ್ಲೂ ಸಂಘಟನೆಯ ದೃಷ್ಟಿಯಿಂದ ಸಭೆ ಮಾಡಲಾಗುತ್ತಿದೆ. ಅಭ್ಯರ್ಥಿ ಯಾರು ಎಂಬುದು ಆಮೇಲೆ ನೋಡೋಣ. ಈಗ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಿದ್ದೇವೆ. ಮೊದಲು ನಮ್ಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ ವೈಫಲ್ಯ ಜನರಿಗೆ ಹೇಳುತ್ತಿದ್ದೇವೆ. ಜಿಲ್ಲೆಯ 18 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ದಕ್ಷಿಣ ಕ್ಷೇತ್ರದ ಮತ ಹೆಚ್ಚು ಮಾಡಲು ಅಡಿಪಾಯ ಹಾಕುತ್ತಿದ್ದೇವೆ. ಅಡಿಪಾಯ ಗಟ್ಟಿ ಇದ್ದರೆ ಅಭ್ಯರ್ಥಿಗಳು ಬರುತ್ತಾರೆ. ಚುನಾವಣೆಗೂ ನೆರವಾಗುತ್ತದೆ ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮೂರು ಚುನಾವಣೆಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇದರಿಂದ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಆಗಿಲ್ಲ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಚುನಾವಣೆ ಮುಗಿದ ಬಳಿಕ ಸಂಘಟನೆಯ ಕಡೆ ಗಮನ ಹರಿಸಬೇಕು. ಮಾಜಿ ಶಾಸಕರು, ಅಭ್ಯರ್ಥಿ ಇಲ್ಲದ ಕಡೆಯಲ್ಲಿ ನಾವೇ ಸಂಘಟನೆ ಜವಾಬ್ದಾರಿ ವಹಿಸಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಅಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ ಎಂದರು.