ಮುಖ್ಯಮಂತ್ರಿಗೆ ಮತ್ತೆ 24 ಗಂಟೆ ಗಡುವು ನೀಡಿದ ಪಂಚಮಸಾಲಿ ಸಮುದಾಯ ಬೆಳಗಾವಿ:ಪಂಚಮಸಾಲಿ ಸಮುದಾಯದ 2ಡಿ ಪ್ರವರ್ಗ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ಮುಖಂಡರು ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಗುರುವಾರ ನಡೆದ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ 24 ಗಂಟೆಗಳ ಗಡುವು ನೀಡಿದ್ದಾರೆ.
ಮೊದಲು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೀಸಲಾತಿಯಲ್ಲಿ ಗೊಂದಲವಿದೆ. ನಮಗೆ ತೃಪ್ತಿ ಇಲ್ಲ. ಹಾಗಾಗಿ ಮೀಸಲಾತಿ ಕೊಡ್ತಿರೋ ಇಲ್ವೋ? ಅನ್ನೋದ ಮೊದಲು ಹೇಳಿ ಅಂತ ತಮ್ಮ ಭಾಷೆಯಲ್ಲಿ ಪ್ರಶ್ನೆ ಮಾಡಿದರು. ಈ ಹಿಂದೆ ನೀವು ನಿಮ್ಮ ತಾಯಿ ಮೇಲೆ ಆಣೆ ಮಾಡಿ ಹೇಳಿದ್ರಿ. ತಾಯಿ ಮೇಲೆ ಗೌರವ ಇದ್ರೆ 24 ತಾಸಿನಲ್ಲಿ ಉತ್ತರ ನೀಡಬೇಕು. ಧಮ್ಕಿ ಮಾಡಿ ನಾವು ಮೀಸಲಾತಿ ಕೇಳುತ್ತಿಲ್ಲ. ಧಮ್ಕಿ ಮಾಡಿದ್ರೆ ಸುವರ್ಣಸೌಧ ಮುತ್ತಿಗೆ ಹಾಕ್ತಿದ್ದೀವಿ. ಅಲ್ಲದೇ ನಿಮ್ಮನ್ನು ಮೂತ್ರ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಏನನ್ನೂ ಮಾಡದೇ ಧಮ್ಕಿ ಅಂತಾ ಅಪವಾದ ಕೊಡ್ತೀರಾ? ಎಂದು ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ನೀಡುವುದಾಗಿ ಭರವಸೆ ಕೊಟ್ರು. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ರೋ ಇಲ್ವೋ ನನಗೆ ಗೊತ್ತಾಗಲಿಲ್ಲ. ನಮಗೆ ನಿಮ್ಮ ನಿರ್ಧಾರಿಂದ ತೃಪ್ತಿ ಇಲ್ಲ. ಹಾಗಾಗಿ ಕರ್ನಾಟಕ ರಾಜಕೀಯ ಭವಿಷ್ಯದಲ್ಲಿ ದೊಡ್ಡ ಮಟ್ಟದ ತೀರ್ಮಾನ ಕೈಗೊಳ್ಳಲು ಈ ಸಭೆ ನಡೆಸಲಾಗುತ್ತಿದೆ ಎಂದರು.
ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ:ಬೊಮ್ಮಾಯಿ ಸಿಎಂ ಆಗಿದಾಗಿನಿಂದಲೂ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರದಿ ಕೊಡುವ ಪುಣ್ಯಾತ್ಮ ಸಹ ಮಳೆ, ಕೊರೊನಾ ಅಂತ ಅದು-ಇದು ನೆಪ ಹೇಳು ಸಮಯ ಕಳೆಯುತ್ತಿದ್ದಾರೆ. ಇವರು ಸುಖಾಸುಮ್ಮನೆ ಕೊಡಬೇಡಿ ಅಂತಾ ಹೇಳಿರಬಹುದು. ಇದರ ಹಿಂದೆ ಶಿಕಾರಿಪುರ ರಾಜ ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಹೀಗೆ ಹೇಳುವ ನನ್ನನ್ನು ಸೂರ್ಯಚಂದ್ರ ಇರೋವರೆಗೂ ಪಕ್ಷದಿಂದ ಉಚ್ಛಾಟನೆ ಮಾಡ್ತೀವಿ ಅನ್ನಬಹದು. ಆದರೆ, ಅದು ಅಸಾಧ್ಯ. ಯಡಿಯೂರಪ್ಪ ಮಾತು ಕೇಳಿ ಎಷ್ಟು ದಿವಸ ನಮಗೆ ಟೋಪಿ ಹಾಕೋರು? ನಿಮ್ಮ ಮಂತ್ರಿಗಳಿಗೆ 2ಡಿ ಮೀಸಲಾತಿ ಎಂದರೆ ಏನು ಅಂತ ಗೊತ್ತಿಲ್ಲ. ಇನ್ನೊಬ್ಬ ಮಂತ್ರಿಗೆ ಸಮಾಜವೂ ಬೇಕಿಲ್ಲ. ಬರೀ ಹಣ ಬೇಕು ಅನ್ನುತ್ತಾರೆ. ನಿಮ್ಮನ್ನು ನಂಬದಂತೆ ಹಲವು ಜನ ಹೇಳಿದ್ದರು. ನಾವು ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರೆ ಅದೇ ನಿಮ್ಮ ಕೊನೆ ದಿವಸ ಆಗುತ್ತಿತ್ತು.
ನೀವು ತಾಯಿ ಆಣೆ ಮಾಡಿದ್ದರಿಂದ ನಾವು ಒಪ್ಪಿದ್ದೇವು ಎಂದು ಹಳೆ ಘಟನೆಗಳನ್ನು ಬಿಚ್ಚಿಟ್ಟರು. ನೀವು ನನಗೆ ಟಿಕೆಟ್ ನೀಡದೇ ಇರಬಹುದು. ಇಲ್ಲವೇ ಪಕ್ಷದಿಂದ ಉಚ್ಛಾಟಿಸಬಹುದು. ಬೊಮ್ಮಾಯಿ ಕ್ಷೇತ್ರದಿಂದ ನಮ್ಮ ಹೋರಾಟ ಅಂತ ಶ್ರೀಗಳು ಈಗಾಗಲೇ ಹೇಳಿದ್ದಾರೆ. ಶಿಕಾರಿಪುರ ರಾಜನ ಕೇಳಿ ಆಟ ಆಡಿದರೆ ಅವರೂ ಹೋಗ್ತಾರೆ, ನೀವು ಹೋಗುತ್ತೀರಿ ಅಂತ ಎಚ್ಚರಿಕೆ ನೀಡಿದರು.
’ನೀವೇ ಬಿಜೆಪಿಯಲ್ಲಿ ಕೊನೆಯ ಸಿಎಂ ಆಗಬೇಕು ಅಂತಾ ಏನಾದರೂ ಇದೆಯಾ’?:ರಾಜ್ಯದ ಎಡಿಜಿಪಿ ಅಲೋಕ್‌ಕುಮಾರ್ ಬಂದು ಸುವರ್ಣಸೌಧ ಮುತ್ತಿಗೆ ಹಾಕದಿದ್ದಕ್ಕೆ ಧನ್ಯವಾದ ಅಂತಾ ಹೇಳಿದ್ರು. ಜಯಪ್ರಕಾಶ್ ಹೆಗಡೆ ಅವರಿಗೆ ವರದಿ ಕೊಡಬೇಡಿ ಅಂತಾ ಹೇಳಿರಬಹುದು. ಹಾಗಾಗಿ ಸುಮ್ಮನೇ ಮಧ್ಯಂತರ ವರದಿ ಪಡೆದರು. ಬಿಜೆಪಿಯಲ್ಲಿ ನಾನೇ ಕೊನೆಯ ಸಿಎಂ ಆಗಬೇಕು ಅಂತಾ ನಿಮಗೆ ಇದೆ ಅನ್ನಿಸುತ್ತೆ.
ಮೇ ತಿಂಗಳವರೆಗೂ ಸಿಎಂ, ಆಮೇಲೆ ಏನಾದರಾಗಲಿ ಅಂತಾ ನೀವು ಮುಖ್ಯಮಂತ್ರಿ ಆಗಿರಬಹುದು. ನೀವು ಕೊಟ್ಟ ಭರವಸೆ ನಮಗೆ ಬೇಡ. ಈಗಾಗಲೇ ಸಿಎಂ ಮೋಸ ಮಾಡಿದ್ದಾರೆ ಎಂಬ ಭಾವನೆ ಇಡೀ ಸಮುದಾಯಕ್ಕಿದೆ. ಮತ್ತೊಬ್ಬರಿಗೆ ಈ ಪಟ್ಟ ಕೊಡಲು ನಾವು ವಿರೋಧ ಮಾಡಲ್ಲ. 2ಡಿ ಬಗ್ಗೆ ಸ್ಪಷ್ಟೀಕರಣ ಇಲ್ಲ. ಕಾನೂನು ಸಚಿವರು ಸಹ ಇಡಬ್ಲ್ಯೂಎಸ್ನಲ್ಲಿ ತಗೆದು ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗೆ ತೆಗೆದು ಹಾಗೆ ಮಾಡುತ್ತೇವೆ ಅಂತಾ ಅವರು ಹೇಳುತ್ತಿದ್ದಾರೆ ಎಂದು ತಮ್ಮ ಮಾತಿನಲ್ಲೇ ವಾಗ್ದಾಳಿ ನಡೆಸಿದರು.
ಕಾರ್ಯಕಾರಿಣಿಯಲ್ಲಿ ಕೂಷಂಕಷ ಚರ್ಚೆ:ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಇಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಕೂಲಂಕುಷವಾಗಿ ಪರಿಶೀಲನೆ ಮಾಡಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ನೀಡಿದ ಮೀಸಲಾತಿ ನ್ಯಾಯವಾಗಿದೆಯಾ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಸಂಪುಟ ನಿರ್ಣಯವನ್ನು ರಾಜ್ಯ ಕಾರ್ಯಕಾರಿಣಿ ಸಭೆ ತಿರಸ್ಕಾರ ಮಾಡಿದೆ. 24 ಗಂಟೆಯಲ್ಲಿ ಮೀಸಲಾತಿ ನೀಡ್ತಿರೋ ಇಲ್ವೋ ಹೇಳಬೇಕು. ಜನವರಿ 12ರೊಳಗೆ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲವಾದರೆ ಜ.13ರಂದು ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಮಾತು ತಪ್ಪಿದ್ದಾರೆ ಎಂದು ಇಡೀ ಸಮಾಜದಲ್ಲಿ ಆಕ್ರೋಶ ಕಾಡುತ್ತಿದೆ. ಅವರ ಮಾತಿಗೆ ಗೌರವ ಕೊಟ್ಟು ನಾವು ಅಂದು ನಮ್ಮ ಹೋರಾಟವನ್ನು ತಾತ್ಕಾಲಿಕ ಸ್ಥಗಿತಗೊಳಸಿದೆವು. ನಮ್ಮ ಸಮುದಾಯದ ಜನ ಆಡಳಿತ ಪಕ್ಷದ ಯಾವುದೇ ಶಾಸಕರು ಸಮಾಧಾನಗೊಂಡಿಲ್ಲ. ಈ ಜನಶಕ್ತಿಯನ್ನು ವ್ಯರ್ಥ ಮಾಡಲ್ಲ. ಈ ಜನ ಶಕ್ತಿಯೇ 2023ರ ಚುನಾವಣೆಯಲ್ಲಿ ಗಂಭೀರವಾದ ಪರಿಣಾಮ ಬೀರಲಿದೆ ಎಂದರು.
’ಪದೇ ಪದೇ ಸುಳ್ಳು ಹೇಳ್ತಿದ್ದಾರೆ’:ಈಗಾಗಲೇ ತಮಗೆ ವಿಷಯ ತಿಳಿದಿದೆ, ನಿರ್ಧಾರ ಮಾತ್ರ ಬಾಕಿ ಇದೆ ಎಂದು ನೇರವಾಗಿ ಮಾತಿಗಿಳಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಕಳೆದ ಎರಡು ವರ್ಷಗಳಿಂದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಪದೇ ಪದೇ ಸಿಎಂ ಮನೆಗೆ ಕರೆದು ಸುಳ್ಳು ಹೇಳುತ್ತಿದ್ದಾರೆ. ತಾಯಿ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳುವರು ಜಗತ್ತಿನಲ್ಲಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಇದು ಲಿಂಗಾಯತ ಧರ್ಮಕ್ಕೆ ಅವಮಾನ. ನೀವೂ ಸಹ ಲಿಂಗಾಯತರು. ಬಸವಣ್ಣನವರ ಹೆಸರು ಇಟ್ಟುಕೊಂಡವರು. ಅಂದು ಭರವಸೆ ಕೊಟ್ಟಿದ್ದರಿಂದ ಸುವರ್ಣಸೌಧ ಮುತ್ತಿಗೆಯಿಂದ ಹಿಂದೆ ಸರಿದೆವು. ಇದೀಗ 2ಡಿ ಅಂತಾ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದೀರಿ. ಸುಮ್ಮನೇ 3ಡಿ ಕೊಟ್ಟಿದ್ರೆ 3ಡಿ ಪಿಕ್ಚರ್ ನೋಡ್ತಿದ್ವಿ ಅಂತಾ ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ:ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯಲ್ಲ. ನಾನು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟ ಮುಂದುವರಿಸುತ್ತೇವೆ. ಬೇರೆ ಬೇರೆ ಪಕ್ಷದಲ್ಲಿ ಇರಬಹುದು, ಆದರೆ ಸಮಾಜ ಬಂದಾಗ ನಾವು ಒಂದೇ. ನಮ್ಮ ಮಕ್ಕಳ ಕೈಗೆ ಮೀಸಲಾತಿ ಪ್ರಮಾಣ ಪತ್ರ ಸಿಗೋವರೆಗೂ ನಮ್ಮ ಹೋರಾಟ ನಡೆಯುತ್ತದೆ. 2ಡಿ ಮಾಡಿದ್ರೆ 2ಎ ಕೆಟಗರಿಯಲ್ಲಿರುವ ಎಲ್ಲ ಅವಕಾಶಗಳು ಸಿಗಬೇಕು. ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ.
ಪೂಜ್ಯರಿಗೆ ನಾವು ಬಹಳಷ್ಟು ನೋವು ಕೊಟ್ಟಿದ್ದೇವೆ. ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕು. ಇದು ನಮ್ಮ ಕೊನೆಯ ಹೋರಾಟ. ಕೊಟ್ಟ ಮಾತು ಉಳಿಸಿಕೊಂಡರೆ ಎಲ್ಲರಿಗೂ ಒಳ್ಳೆಯದು. ಇಲ್ಲದಿದ್ದರೆ ನೀವು ಸಮಾಜದ ಶಾಪಕ್ಕೆ ಈಡಾಗ್ತೀರಿ. ನಿಮ್ಮ ಸರ್ಕಾರಕ್ಕೆ ಹಿನ್ನಡೆ ಆಗೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ದಕ್ಷಿಣ ಕರ್ನಾಟಕದಲ್ಲಿ ಗೌಡ ಲಿಂಗಾಯತರು ಇದ್ದಾರೆ ಅನ್ನೋದನ್ನು ಮರೀಬೇಡಿ. ಹಾಗಾಗಿ 24 ಗಂಟೆಯಲ್ಲಿ ಮೀಸಲಾತಿ ಕೊಡ್ತಿರೋ ಇಲ್ವೋ ಹೇಳಿ. ಇಲ್ಲ ಎಂದರೆ ಇಲ್ಲ ಅಂತ ಹೇಳಿಬಿಡಿ. ಇದರಿಂದ ನಾವು ಸುಮ್ಮನಿರ್ತೀವಿ. ಮುಂದೆ ನಿಮ್ಮ ಗತಿ ಏನಾಗುತ್ತೆ ನೀವೇ ಊಹಿಸಿಕೊಳ್ಳಿ ಎಂದರು.
ಇದನ್ನೂ ಓದಿ:ಬೊಮ್ಮಾಯಿ ಸರ್ಕಾರದ ಮೀಸಲಾತಿ ಅಸ್ತ್ರ: ಪ.ಜಾತಿಯ ಒಳ ಮೀಸಲಾತಿಯ ಒಳಸುಳಿ ಹೇಗಿದೆ?