ಬೆಳಗಾವಿ:ಎರಡು ದಶಕಗಳ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಯ ಹೋರಾಟದ ಕುರಿತಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಸಂಜೆ ಒಳಗಾಗಿ ತಮ್ಮ ಅಭಿಪ್ರಾಯವನ್ನ ನಮ್ಮ ಸಮುದಾಯಕ್ಕೆ ತಿಳಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಹುಸಂಖ್ಯಾತ ಸಮಾಜದ ಎರಡು ದಶಕಗಳ ಹಕ್ಕೊತ್ತಾಯವಾದ 2ಎ ಹಾಗೂ ಓಬಿಸಿ ಮೀಸಲಾತಿಗೆ ಮೊದಲ ಬಾರಿಗೆ ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೀಸಲಾತಿ ಹೋರಾಟ ಕುರಿತು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ಈ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕೆಂದು ಸಮಾಜದ ಪರವಾಗಿ ಒತ್ತಾಯ ಮಾಡಲಾಗುತ್ತಿದೆ. ಬಿಎಸ್ವೈ ಎರಡು ಬಾರಿ ಮುಖ್ಯಮಂತ್ರಿ ಆಗಲು ನಮ್ಮ ಸಮಾಜದ ಬಹುದೊಡ್ಡ ಪಾತ್ರವಿದೆ. ಜತೆಗೆ ಸಮಾಜದ ಋಣಭಾರವಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆಯೊಳಗಾಗಿ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಪಂಚಮಸಾಲಿ ಮೀಸಲಾತಿ ಯಡಿಯೂರಪ್ಪನವರ ಆಡಳಿತದಲ್ಲಿಯೇ ಮುಗಿಬೇಕೆಂಬುದು ಸಮಾಜದ ಒತ್ತಾಯ. ಹೀಗಾಗಿ ಅವರೇ ಮೀಸಲಾತಿ ಬಗ್ಗೆ ಘೋಷಿಸಬೇಕು. ಸರ್ಕಾರದ ಸ್ಪಂದನೆ ನೋಡಿಕೊಂಡು ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಕೂಡಲಸಂಗಮ ಶ್ರೀ ಹೇಳಿದರು.