ಬೆಳಗಾವಿ: ನಮ್ಮ ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಬೆಂಬಲಿಗರಿಗೆ ಮತ ಹಾಕಿ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಪಂಚ ವಿರಾಟ್ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಹುಚ್ಚು ಭ್ರಮೆಯಿತ್ತು, ಶಾಸಕರನ್ನು ಮಾಡಲು, ಮಂತ್ರಿ ಮಾಡಲು ನಮ್ಮ ಪೀಠವಿದೆ ಅಂದ್ಕೊಂಡಿದ್ದೆ. ಈಗ ಸಮಾಜದ ಕಣ್ಣೀರು ಒರೆಸಲು ಪೀಠವಿದೆ ಅನ್ನೋ ಅರಿವಾಗಿದೆ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಹತ್ತೇ ಜನ ಶಾಸಕರಿದ್ದರೆ ಸಾಕು ಅನ್ನಿಸುತ್ತಿದೆ. ಸಮಾಜಕ್ಕಾಗಿ ಒಗ್ಗಟ್ಟಾಗಿ ಹೋರಾಡೋಣ, ಪಕ್ಷಕ್ಕಿಂತ ಜನ್ಮ ಕೊಟ್ಟ ಸಮಾಜ ಮುಖ್ಯ. ಮುಖ್ಯಮಂತ್ರಿ ಐದು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಪಂಚಮಸಾಲಿ ಸಮಾಜ ಹಾಗೂ ಮುಖಂಡರು ಮುಂದಿನ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದರು.
ನಾವು ಕೂಡಲ ಸಂಗಮ ಪೀಠ ಕಟ್ಟಿದ್ದು ಬಡ ಮಕ್ಕಳಿಗಾಗಿ. ನಮ್ಮ ಪಾದಯಾತ್ರೆ ತಪ್ಪಿಸಲು ಯತ್ನಿಸಿದರು, ಬೆಂಗಳೂರು ಮುಟ್ಟಬಾರದು ಎಂದು ಪ್ರಯತ್ನಿಸಿದರು, ಅರಮನೆ ಮೈದಾನದಲ್ಲಿ ಸಮಾವೇಶ ಮಾಡದಂತೆ ಕುತಂತ್ರ ಮಾಡಿದರು. ಯತ್ನಾಳ್, ಕಾಶಪ್ಪನವರ ಬಂಧಿಸುವ ಹುನ್ನಾರ ಮಾಡಿದರು, ಹೊರಗಿನ ಶಕ್ತಿಗಿಂತ ಒಳಗಿನ ಶಕ್ತಿಗಳೇ ನಮ್ಮನ್ನು ತುಳಿಯಲು ಪ್ರಯತ್ನಿಸಿದರು. ಪರ್ಯಾಯ ಪೀಠ ರಚಿಸಿ ಸಮಾಜ ಒಡೆಯುವ ಯತ್ನ ಮಾಡಿದರು. ನಮ್ಮ ಹೋರಾಟದಲ್ಲಿ ಪ್ರಾಮಾಣಿಕತೆ ಇರುವ ಕಾರಣ ಇವತ್ತು ಯಶಸ್ವಿಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ವಿನಯ ಕುಲಕರ್ಣಿಯವರಿಗೆ ಕೊಟ್ಟಿರುವ ತೊಂದರೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಎಂದು ಸ್ವಾಮೀಜಿ ಭಾವುಕರಾದರು. ನಮ್ಮ ಸಮಾಜದ ಜನರೇ ನಮ್ಮ ಜಗದ್ಗುರು. ಇದೇ ಬೆಳಗಾವಿ ಜಿಲ್ಲೆಯಿಂದಲೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಆರಂಭ ಆಗಿತ್ತು. ಇದೇ ಜಿಲ್ಲೆಯಲ್ಲಿಯೇ ಈಗ ವಿರಾಟ ಸಮಾವೇಶ ನಡೆಯುತ್ತಿದೆ. ಜನರು ನನ್ನನ್ನ ಗುರು ಮಾಡಿದ್ದು ಶಾಸಕರು ಮಂತ್ರಿಗಳನ್ನ ಮಾಡಲಿಕ್ಕೆ ಅಲ್ಲ. ಬಂಡವಾಳಶಾಹಿಗಳ ಪರ ಕೆಲಸ ಮಾಡಲಿಕ್ಕೆ ನಾ ಸ್ವಾಮಿ ಆಗಿಲ್ಲ. ಈ ದೇಹಕ್ಕೆ ಸಾವು ಯಾವಾಗಲಾದರೂ ಬರಬಹುದು. ಈ ಸಾವು ಬರುವುದೊರಳಗಾಗಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸಬೇಕೆಂದು ನಾನು ಹೋರಾಟ ಆರಂಭ ಮಾಡಿದೆ. ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ ಕಾರಣ ನಾನು ಪಾದಯಾತ್ರೆ ಮಾಡಿದೆ. ನಾನು ಜನರಿಗೆ ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತಿಗಾಗಿ ಹೋರಾಟ ಮಾಡಿದ್ದೇನೆ.
ನಮ್ಮ ಹೋರಾಟಗಾರರು ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ನಾಯಕರು ತಮ್ಮ ವೈಯಕ್ತಿಕ ಜೀವನ ಮರೆತು ಮೀಸಲಾತಿಗಾಗಿ ನನ್ನ ಜೊತೆ ಹೋರಾಟ ಮಾಡಿದ್ದಾರೆ ಎಂದ ಸ್ವಾಮೀಜಿ ಹೇಳಿದರು.
ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭವಾದಗ ಬಹಳಷ್ಟು ಜನರು ಅಡ್ಡಪಡಿಸಿದ್ರು. ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ನಮ್ಮ ಒಳಗಿರುವವರು ಪ್ರಯತ್ನ ಮಾಡಿದ್ರು. ಮೀಸಲಾತಿ ಹೋರಾಟದ ಹಾದಿ ತಪ್ಪಿಸಲು ಮತ್ತೊಂದು ಪೀಠವನ್ನ ಹುಟ್ಟಿಹಾಕಿದ್ರು ಎಂದು ಪರೋಕ್ಷವಾಗಿ ಮುರಗೇಶ ನಿರಾಣಿಯವರ ವಿರುದ್ಧ ಶ್ರೀಗಳು ವಾಗ್ದಾಳಿ ನಡೆಸಿದರು. ಈ ಸಮಾಜ ಎಲ್ಲಿಯೂ ಸಹ ನಮ್ಮನ್ನು ಕೈಬಿಟ್ಟಿಲ್ಲ. ನಮ್ಮ ನಾಯಕರು ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದು ಘೋಷಿಸಿದರು.
ಬಳಿಕ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮೀಸಲಾತಿ ಕೊಡ್ತೀನಿ ಅಂತಾ ಸಿಎಂ ಹೇಳಿದ್ದರು, ಆದರೇ ನಮ್ಮವರೇ ಅಡ್ಡಿ ಪಡ್ಡಿಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಮೀಸಲಾತಿ ಸಿಗೋವರೆಗೂ ಬಿಡಲ್ಲಾ. ನೀವು ಚಿಂತೆ ಮಾಡದಿರಿ, ತಹಶೀಲ್ದಾರ್ ಕಚೇರಿಯಲ್ಲಿ 2ಎ ಮೀಸಲಾತಿ ಪ್ರಮಾಣಪತ್ರ ಸಿಗುತ್ತದೆ ಎಂದು ಸಮುದಾಯದ ಜನರಿಗೆ ಭರವಸೆ ನೀಡಿದರು.
ಇದನ್ನೂ ಓದಿ:ಪಂಚಮಸಾಲಿ ಹೋರಾಟದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಮಾಡುತ್ತಿದ್ದಾರೆ: ಯತ್ನಾಳ್