ಬೆಳಗಾವಿ: ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಗಂದಿಗವಾಡ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಪೇಂಟರ್ ಸಾವು - ವಿದ್ಯುತ್ ಶಾಕ್
ಮನೆಗೆ ಪೇಂಟಿಂಗ್ ಮಾಡುವಾಗ ಆಕಸ್ಮಿಕವಾಗಿ ಸರ್ವೀಸ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಪೇಂಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಂದಿಗವಾಡ ಗ್ರಾಮದಲ್ಲಿ ನಡೆದಿದೆ.
ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ರಾಜು ಕಮ್ಮಾರ (42) ಮೃತ ದುರ್ದೈವಿ. ಮೃತ ವ್ಯಕ್ತಿಯು ನೂತನವಾಗಿ ನಿರ್ಮಾಣವಾದ ಕಟ್ಟಡವೊಂದಕ್ಕೆ ಬಣ್ಣ ಬಳಿಯಲು ಗುತ್ತಿಗೆ ಪಡೆದುಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಬಿಲ್ಡಿಂಗ್ ಮೇಲ್ಛಾವಣಿಯ ಮುಂದಿರುವ ಕಮಾನಿಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸರ್ವೀಸ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ರಾಜು ಕಮ್ಮಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ನಂದಗಡ ಪೊಲೀಸ್ ಠಾಣಾ ಪಿಎಸ್‍ಐ ಯು.ಟಿ.ಅವಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಚನಾಮೆ ನಡೆಸಿದ ಬಳಿಕ ಮೃತ ವ್ಯಕ್ತಿಯ ಶವವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.