ಪೈಲಟ್ ಹನುಮಂತರಾವ್ ಸಾರಥಿಗೆ ಬೆಳಗಾವಿಯಲ್ಲಿ ಗಣ್ಯರಿಂದ ಅಂತಿಮ ನಮನ ಬೆಳಗಾವಿ: ಗ್ವಾಲಿಯರ್ ಸಮೀಪ ಸಂಭವಿಸಿದ ವಾಯುಪಡೆಯ ಯುದ್ಧ ವಿಮಾನಗಳ ಪತನದ ವೇಳೆ ಹುತಾತ್ಮರಾದ ಪೈಲಟ್ ಮತ್ತು ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರಿಗೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಯೋಧನ ಪಾರ್ಥಿವ ಶರೀರವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ದರ್ಶನ್ ಮತ್ತಿತರೆ ಗಣ್ಯರು ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್-30, ಮಿರಾಜ್-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್ ಸಾವು
ಸಂತಾಪ ಸೂಚಿಸಿದ ಜಿಲ್ಲಾಧಿಕಾರಿ:ಗ್ವಾಲಿಯರ್ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ ವಿಂಗ್ ಕಮಾಂಡರ್ ಶ್ರೀ ಹನುಮಂತರಾವ್ ಸಾರಥಿ ಅವರು ನಿಧನರಾದ ವಿಷಯ ತಿಳಿದು ತುಂಬ ದುಃಖವಾಯಿತು. ಹೆಮ್ಮೆಯ ಯೋಧ ಹನುಮಂತರಾವ್ ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗಣ್ಯರಿಂದ ಅಂತಿಮ ನಮನ ಇದನ್ನೂ ಓದಿ:ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ವಿಂಗ್ ಕಮಾಂಡರ್, ಕನ್ನಡಿಗ ಹನುಮಂತರಾವ್ ಸಾರಥಿ ಮರಣ
ಯುದ್ಧ ವಿಮಾನ ದುರಂತ: ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳಾದ ಸುಖೋಯ್ 30 ಮತ್ತು ಮಿರಾಜ್ 2000 ನಿನ್ನೆ ದೈನಂದಿನ ಅಭ್ಯಾಸಕ್ಕೆ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದವು. ಇದಾದ ಕೆಲ ಹೊತ್ತಿನಲ್ಲೇ ಗ್ವಾಲಿಯರ್ ವಾಯುನೆಲೆಯಿಂದ ಸ್ವಲ್ವ ದೂರದಲ್ಲಿ ಅಪಘಾತ ಸಂಭವಿಸಿ, ಪತನಗೊಂಡಿದ್ದವು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಂತಾಪ..ಮಧ್ಯಪ್ರದೇಶದ ಮೊರೆನಾದಲ್ಲಿ ಶನಿವಾರ ನಡೆದ ಯುದ್ಧ ವಿಮಾನ ಪತನ ಅವಘಡದಲ್ಲಿ ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮರಾದ ಬಗ್ಗೆ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. ಈ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಹನಮಂತರಾವ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದ ಸದಸ್ಯರಿಗೆ ಹನಮಂತರಾವ್ ಅಗಲಿಕೆ ತಡೆಯುವ ಶಕ್ತಿ ನೀಡಲಿ ಎಂದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗಣ್ಯರಿಂದ ಅಂತಿಮ ನಮನ ರಾಷ್ಟ್ರೀಯ ಬಿಜೆಪಿ ಕೃಷಿ ಮೋರ್ಚಾ ಕಾರ್ಯಕ್ರಮ ಬಳಿಕ ನಾನೂ ಹನಮಂತರಾವ್ ಮನೆಗೆ ಭೇಟಿ ನೀಡುತ್ತೇನೆ. ವಿಂಗ್ ಕಮಾಂಡರ್ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ಘಟನೆ ನಡೆದಿದ್ದು ಅತ್ಯಂತ ದುರ್ದೈವದ ಸಂಗತಿ. ದೇವರು ಆ ಕುಟುಂಬ ವರ್ಗಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂದು ಹೇಳಿದರು.
ಇದನ್ನೂ ಓದಿ:3 ವರ್ಷದ ಮಗಳು, 1 ವರ್ಷದ ಮಗನ ಅಗಲಿದ 'ಸಾರಥಿ': ಹುತಾತ್ಮ ಹನುಮಂತರಾವ್ ತಂದೆ, ಅಣ್ಣನಿಗೂ ಸೇನೆಯ ನಂಟು