ಬೆಳಗಾವಿ: ಖಾನಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಅಬ್ಬರದ ಮಳೆಯಿಂದ ಬಹುತೇಕ ಕಡೆ ಭತ್ತದ ಬೆಳೆ ಮಳೆಯಲ್ಲಿ ಕೊಚ್ಚಿ ಹೋಗಿದೆ.
ಮಳೆಯಿಂದಾಗಿ ಬೆಳೆ ನೀರು ಪಾಲಾದರೆ, ಮನೆಗಳಿಗೆ ನೀರು ನುಗ್ಗಿ ಮಳೆ ಬೆಳಗಾವಿಯಲ್ಲಿ ಅವಾಂತರ ಸೃಷ್ಟಿಸಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ರೈತರು ಮುಂಗಾರು ತಡವಾಗಿ ಬಂದ ಹಿನ್ನೆಲೆ ಭತ್ತ ನಾಟಿ ಮಾಡಿದ್ದರು. ನಾಟಿಮಾಡಿದ್ದ ಭತ್ತ ಮಳೆ ಅಬ್ಬರಕ್ಕೆ ನಾಶವಾಗಿದೆ. ಖಾನಾಪುರ ತಾಲೂಕಿನ ಅವರೊಳ್ಳಿ, ಬಿಳಕಿ, ಕೊಡಚವಾಡ, ಹಿರೇಮುನವಳ್ಳಿ, ಚಿಕ್ಕದಿನಕೊಪ್ಪ ಭಾಗದಲ್ಲಿ ಭತ್ತದ ಬೆಳೆ ಕೊಚ್ಚಿಹೋಗಿದೆ.
ಕೆಲವಡೆ ಭತ್ತದ ಬೆಳೆ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಗದ್ದೆಯಲ್ಲಿ ತುಂಬಿರುವ ನೀರು ಹೊರಹಾಕಲು ರೈತರು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರರು ಬಂದು ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಮೂರು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಗೆ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಸಮರ್ಥ ನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಸಮರ್ಥ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಭಾಗಶಃ ನೆರೆಗೆ ತುತ್ತಾಗಿವೆ. ಮನೆಗಳು ಸೇರಿದಂತೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.
ತೆಗ್ಗು ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡರೂ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.