ಪತ್ನಿ ತಾಳಿ ಒತ್ತೆ ಇಟ್ಟು ಭತ್ತ ನಾಟಿ ಮಾಡಿದ್ದ ರೈತ ಕಂಗಾಲು : ಅನ್ನದಾತನಿಗೆ ಬೇಕಿದೆ ಸರ್ಕಾರದ ನೆರವು ಬೆಳಗಾವಿ: ಮುಂಗಾರು ಮಳೆ ಅಭಾವದಿಂದ ಭತ್ತದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಪತ್ನಿಯ ಮಂಗಳಸೂತ್ರ ಬ್ಯಾಂಕಿನಲ್ಲಿ ಒತ್ತೆ ಇಟ್ಟು ಭತ್ತ ನಾಟಿ ಮಾಡಿದ್ದ ರೈತನಿಗೆ ಇತ್ತ ಭತ್ತವೂ ಇಲ್ಲ, ಅತ್ತ ಬಂಗಾರವೂ ಇಲ್ಲದ ಸ್ಥಿತಿ ಅನುಭವಿಸುತ್ತಿದ್ದಾರೆ. ಅನ್ನಕ್ಕಾಗಿ ಭತ್ತ ಬೆಳೆಯುವ ಅನ್ನದಾತನ ಕರುಣಾಜನಕ ಕಥೆ ಇಲ್ಲಿದೆ.
ಒಂದೆಡೆ ಹಾಳಾಗಿರುವ ಭತ್ತವನ್ನು ಕೀಳುತ್ತಿರುವ ರೈತ ಮಹಿಳೆ, ಮತ್ತೊಂದೆಡೆ ಸಹಾಯಕ್ಕಾಗಿ ಸರ್ಕಾರಕ್ಕೆ ಅಂಗಲಾಚುತ್ತಿರುವ ರೈತ ದಂಪತಿ. ಈ ಮನಕಲಕುವ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಶಾಹಪುರ ಭಾಗದ ಭತ್ತದ ಗದ್ದೆಯಲ್ಲಿ.
ಶಾಹಪುರ ರೈತ ರಾಜು ಕಣಬರಕರ್ ತಮ್ಮ 12 ಗುಂಟೆ ಭೂಮಿಯಲ್ಲಿ ಭತ್ತ ಬೆಳೆಯಲು ಪತ್ನಿ ವಿಜಯಾ ಅವರ 10 ಗ್ರಾಂ ಚಿನ್ನದ ಮಂಗಳಸೂತ್ರವನ್ನು ಖಾಸಗಿ ಬ್ಯಾಂಕಿನಲ್ಲಿ ಒತ್ತೆ ಇಟ್ಟು 30 ಸಾವಿರ ರೂ. ಸಾಲ ಪಡೆದಿದ್ದರು. ಇದರಲ್ಲಿ 25 ಸಾವಿರ ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದರು. ಇನ್ನುಳಿದ ಐದು ಸಾವಿರ ರೂ. ಮನೆ ಕೆಲಸಕ್ಕೆ ಬಳಸಿಕೊಂಡಿದ್ದರು. ಒಳ್ಳೆಯ ಫಸಲು ಬಂದ ನಂತರ ಮಂಗಳಸೂತ್ರ ಬಿಡಿಸಿಕೊಳ್ಳುವ ಕನಸು ಕಂಡಿದ್ದರು. ಆದರೆ, ನೀರಿನ ಕೊರತೆಯಿಂದ ರೋಗಕ್ಕೆ ತುತ್ತಾದ ಭತ್ತ ಸಂಪೂರ್ಣ ಹಾನಿಯಾಗಿದೆ. ಒಂದು ಹಿಡಿಯಷ್ಟೂ ಭತ್ತ ಬರದಷ್ಟು ಸ್ಥಿತಿ ನಿರ್ಮಾಣವಾಗಿದೆ.
ಈಟಿವಿ ಭಾರತ್ ಜೊತೆಗೆ ತಮ್ಮ ಅಳಲು ತೋಡಿಕೊಂಡ ರೈತ ರಾಜು ಕಣಬರಕರ್, ನಮ್ಮ 20 ಗುಂಟೆ ಪೈಕಿ 8 ಗುಂಟೆ ಭೂಮಿ ಬೈಪಾಸ್ ನಿರ್ಮಾಣಕ್ಕೆ ಹೋಗಿದೆ. 12 ಗುಂಟೆಯಲ್ಲಿ ಭತ್ತ ಬೆಳೆಯಲು ನನ್ನ ಹೆಂಡತಿಯ ಬಂಗಾರದ ಮಂಗಳಸೂತ್ರ ಒತ್ತೆಇಟ್ಟಿದ್ದೆವು. ಆದರೆ ಈಗ ಬೆಳೆ ಕೈಕೊಟ್ಟಿದ್ದರಿಂದ ತುಂಬಾ ಸಮಸ್ಯೆಯಲ್ಲಿದ್ದೇವೆ. ಹಾಳಾಗಿರುವ ಭತ್ತವನ್ನು ಕೊಯ್ದು ಸುಡಬೇಕಷ್ಟೇ. ಈ ಮೇವನ್ನು ಜಾನುವಾರುಗಳು ಕೂಡ ತಿನ್ನುವುದಿಲ್ಲ. ದಯವಿಟ್ಟು ಸರ್ಕಾರದಿಂದ ಸಹಾಯ ಮಾಡಿ, ತಮ್ಮನ್ನು ಬದುಕಿಸುವಂತೆ ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಶಾಹಪುರ, ಯಳ್ಳೂರ, ವಡಗಾವಿ, ಉಚಗಾಂವ್, ಕಡೋಲಿ, ಅಗಸಗಿ, ದೇವಗಿರಿ, ಬಸವನಕುಡಚಿ, ಮುತಗಾ, ನೀಲಜಿ ಸೇರಿ ಸುತ್ತಲಿನ ಸಾಕಷ್ಟು ಗ್ರಾಮಗಳ ಬಾಸುಮತಿ, ಇಂದ್ರಾಣಿ, ಕುಮುದ ಎಂಬ ಪ್ರಸಿದ್ಧ ತಳಿಯ ಭತ್ತವನ್ನು ಇಲ್ಲಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ನೀರಿನ ಅಭಾವದಿಂದಾಗಿ ಭತ್ತದ ಇಳುವರಿ ಕಡಿಮೆಯಾಗಿದೆ. ನೀರಾವರಿ ಸೌಲಭ್ಯ ಇದ್ದ ರೈತರಿಗೆ ಶೇ.25ರಷ್ಟು ಇಳುವರಿ ಬರಬಹುದು. ಆದರೆ, ಮಳೆಯಾಶ್ರಿತ ರೈತರಿಗೆ ಬಿತ್ತಿದ ಕಾಳು ಕೂಡ ಬರದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರ ಸಂಕಷ್ಟ ಹೇಳತೀರದಂತಾಗಿದೆ. ರೈತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರೈತ ರಾಜು ಮರವೆ ಎಂಬುರು ಮಾತನಾಡಿ, ಭತ್ತದ ನಾಟಿ ಮಾಡಲು ಎಕರೆಗೆ ಕಡಿಮೆ ಎಂದರೂ ಐವತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಮಳೆ ಕಡಿಮೆಯಾಗಿ, ಬಿಸಿಲು ಹೆಚ್ಚಾಗಿದ್ದರಿಂದ ಭತ್ತ ಒಣಗಿ ಹೋಗಿದೆ. ರೈತ ದೇಶದ ಬೆನ್ನೆಲುಬು ಎಂದು ಸರ್ಕಾರ ಹೇಳುತ್ತದೆ. ಆದರೆ, ಈಗ ರೈತ ಭೂಮಿಯಲ್ಲೇ ಮಣ್ಣಾಗುವ ಸ್ಥಿತಿ ಎದುರಾಗಿದೆ. ಸರ್ಕಾರ ಹೆಚ್ಚು ಪರಿಹಾರ ನೀಡಿ ರೈತರನ್ನು ಸಾವಿನ ದವಡೆಯಿಂದ ಪಾರು ಮಾಡಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ :ಕೊಪ್ಪಳ: ಮಳೆ ಇಲ್ಲದೆ ಒಣಗುತ್ತಿರುವ ಬೆಳೆ, ಬಿಂದಿಗೆ ಹಿಡಿದು ನೀರುಣಿಸುತ್ತಿರುವ ರೈತ; ಬರ ಪರಿಹಾರಕ್ಕೆ ಒತ್ತಾಯ