ಬೆಳಗಾವಿ: ಕಾಂಗ್ರೆಸ್ ನವರು ಹಿಂದೂಗಳು ಹೌದೋ ಅಲ್ವೋ ಅನ್ನೋ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತಿದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಬಿತ್ತಿರುವ ಕಳೆಯನ್ನು ನಾವೆಲ್ಲರೂ ಕಿತ್ತು ಹಾಕಬೇಕು ಎಂದು ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ಕೊಡುತ್ತಾರೆ. ಜಿಹಾದಿ ಮನಸ್ಥಿತಿ ಬೆಂಬಲಿಸುವವರನ್ನು ಖಂಡಿಸುವ ಎದೆಗಾರಿಕೆ ನಿಮಗೆ ಇದೆಯಾ ಎಂದು ಸತೀಶ್ ಜಾರಕಿಹೊಳಿಗೆ ಪಿ ರಾಜೀವ್ ಪ್ರಶ್ನಿಸಿದರು. ಅಲ್ಲದೇ ಹಿಂದೂಗಳು ಅಶ್ಲೀಲ ಎನ್ನುವ ನಿಮಗೆ ಜಿಹಾದಿ ಮನಸ್ಥಿತಿ ಖಂಡಿಸಲು ಯಾಕೆ ಆಗಿಲ್ಲ ಎಂದು ಕೇಳಿದರು.
ಇನ್ನು, ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಆರೋಪಿ ಶಾರಿಕ್ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕರ್ನಾಟಕ ಸ್ಲೀಪರ್ ಸೆಲ್ ಆಗ್ತಿದೆಯಾ ಎಂಬ ಅನುಮಾನಗಳು ಕಾಡತೊಡಗಿದ್ದು, ಇದನ್ನ ಹತ್ತಿಕ್ಕಲು ಗೃಹ ಸಚಿವರು ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಈ ಪ್ರಕರಣ ಕರ್ನಾಟಕ, ಭಾರತ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಶಾರೀಕ್ನಂತವರು ನಮ್ಮ ನಿಮ್ಮ ಮಧ್ಯೆ ಇರಬಹುದು. ಪ್ರತಿಯೊಬ್ಬ ಪ್ರಜೆಯೂ ಗುಪ್ತಚರ ಇಲಾಖೆ ಕೆಲಸ ಮಾಡಿದಂತೆ ಮಾಡಿ. ಇಂತವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.