ಬೆಳಗಾವಿ :ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ ಹೆಚ್ಚುವರಿ ಆಕ್ಸಿಜನ್ ಹಂಚಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಪರಿಹಾರವಾಗಲಿದೆ ಎಂದು ರಾಜ್ಯದ ಆಕ್ಸಿಜನ್ ಪೂರೈಕೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶೆಟ್ಟರ್ ನೇತೃತ್ವದಲ್ಲಿ ಮಹತ್ವದ ಸಭೆ ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ,
ಕೊಲ್ಲಾಪುರದಿಂದ ಬೆಳಗಾವಿ ಜಿಲ್ಲೆಗೆ ಪೂರೈಕೆಯಾಗುತ್ತಿದ್ದ 20 ಕೆ.ಎಲ್. ಆಕ್ಸಿಜನ್ ಪೂರೈಕೆ ನಿರ್ಬಂಧ ವಿಧಿಸಿದರೆ ಆಕ್ಸಿಜನ್ ಮರುಹಂಚಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜತೆ ಚರ್ಚೆ ನಡೆಸಲಾಗುವುದು ಎಂದರು.
ಬಳ್ಳಾರಿಯಿಂದ ಮಹಾರಾಷ್ಟ್ರಕ್ಕೆ ಹಂಚಿಕೆಯಾಗಿದ್ದ ಆಕ್ಸಿಜನ್ ಪ್ರಮಾಣವನ್ನು ಕರ್ನಾಟಕ ರಾಜ್ಯಕ್ಕೆ ಮರುಹಂಚಿಕೆಯಾಗಿರುವುದರಿಂದ ಈ ಕುರಿತು ಅಲ್ಲಿನ ಸರ್ಕಾರದ ಜತೆ ಚರ್ಚಿಸಲಾಗುವುದು. ಕೇಂದ್ರ ಸರ್ಕಾರ ಕೂಡ ಟ್ಯಾಂಕರ್ ನೀಡಲಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಗೆ ಒಂದು ಟ್ಯಾಂಕರ್ ಮೀಸಲಿಡಲಾಗುವುದು. ಹೋಮ್ ಐಸೋಲೇಷನ್ ಇರುವವರಿಗೆ ಸರಿಯಾಗಿ ಔಷಧಿ ಕಿಟ್ ನೀಡುವುದರ ಜತೆಗೆ ಯಾವ ರೀತಿ ಮನೆಯಲ್ಲಿ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ತಂಡಗಳು ತಿಳುವಳಿಕೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಒಂದು ವೇಳೆ ತಾಲೂಕು ಕೇಂದ್ರಗಳಲ್ಲಿ ಬಳಕೆ ಮಾಡಲು ಸಾಧ್ಯವಾಗದಿದ್ದರೆ, ಅಂತಹ ವೆಂಟಿಲೇಟರ್ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಬಳಕೆ ಕುರಿತು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪರೀಕ್ಷಾ ವರದಿ ತಕ್ಷಣ ನೀಡಲು ಸಲಹೆ: ಸೋಂಕು ತಪಾಸಣೆಗೆ ಮಾದರಿಯನ್ನು ಸಂಗ್ರಹಿಸಿದ ನಂತರ ಆದಷ್ಟು ಬೇಗನೇ ತಪಾಸಣಾ ವರದಿ ನೀಡಬೇಕು. ಇದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ಸಾಧ್ಯವಾಗಲಿದೆ.ಆದ್ದರಿಂದ ಸಾಧ್ಯವಾದರೆ 24 ಗಂಟೆಯೊಳಗೆ ವರದಿ ನೀಡಲು ಕ್ರಮವಹಿಸಬೇಕು. ಬಿಮ್ಸ್ ನಲ್ಲಿ ಅಗತ್ಯವಿರುವ ವೈದ್ಯರು, ತಂತ್ರಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಈಗಾಗಲೇ ಅನುಮತಿ ನೀಡಿರುತ್ತದೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕುಮಾರ್, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಡಿಹೆಚ್ಒ ಡಾ. ಶಶಿಕಾಂತ ಮುನ್ಯಾಳ, ಬೀಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಓದಿ:ಸಿಎಂ ಬಿಎಸ್ವೈಗೆ ಕರೆ ಮಾಡಿ ಕೋವಿಡ್ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ