ಬೆಳಗಾವಿ: ಜಲ ಪ್ರಳಯಕ್ಕೆ ಮನೆ ಕಳೆದುಕೊಂಡು ಶಾಲೆಯಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನು ಅಧಿಕಾರಿಗಳೇ ಖಾಲಿ ಮಾಡಿಸುತ್ತಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.
ನಾಳೆಯೇ ನಿರಾಶ್ರಿತರ ಕೇಂದ್ರದಿಂದ ಹೊರ ನಡೆಯಬೇಕು ಎಂದು ಬಿಇಒ ಆದೇಶ ಹೊರಡಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಸಂತ್ರಸ್ತರು ಹುಣಶ್ಯಾಲ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು. ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಶೆಡ್ ಹಾಕಿಕೊಡುವಂತೆ ನಿರಾಶ್ರಿತರು ಆಗ್ರಹಿಸಿದರು. ಪ್ರವಾಹಕ್ಕೆ ಹುಣಶ್ಯಾಲ ಗ್ರಾಮದಲ್ಲಿ 40ಕ್ಕೂ ಅಧಿಕ ಮನೆಗಳು ಕುಸಿದಿವೆ. ಹೀಗಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದರು.
ಈಗ ದಿಢೀರನೇ ಶಾಲೆಯನ್ನು ಖಾಲಿ ಮಾಡಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ನಿರಾಶ್ರಿತರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪರಿಹಾರ ಕೇಂದ್ರ ಇರುವ ಶಾಲೆಗಳಿಗೆ ಆಗಸ್ಟ್ 20 ರವರೆಗೆ ರಜೆ ಘೋಷಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಆದರೂ ಕಿರಿಯ ಅಧಿಕಾರಿಗಳು ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಸಂತ್ರಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.