ಬೆಳಗಾವಿ:ಕೋವಿಡ್ ರೂಪಾಂತರಿ ತಳಿಯ ಬಗ್ಗೆ ನಮ್ಮ ಸರ್ಕಾರ ಎಚ್ಚರವಹಿಸಿದೆ. ಇಡೀ ರಾಜ್ಯಾದ್ಯಂತ ತಾಲೂಕು, ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲ ಆಸ್ಪತ್ರೆಗಳಲ್ಲಿ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು. ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ: ಹುಬ್ಬಳ್ಳಿಯ ಕಿಮ್ಸ್ ಹಾಗೂ ಬೆಳಗಾವಿ ಜಿಲ್ಲೆಯ ಒಂದು ಆಸ್ಪತ್ರೆಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆಯಾ ವಿಭಾಗದ ಆರೋಗ್ಯ ಅಧಿಕಾರಿಗಳು ಅಲ್ಲಿರುವ ಸಂಸ್ಥೆಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಸಚಿವರು ಹೇಳಿದರು.
ರಾಜ್ಯ ವ್ಯಾಪಿ ಮಾಕ್ ಡ್ರಿಲ್:ಎಲ್ಲ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳು ನನಗೆ ವರದಿ ನಿಡುತ್ತಾರೆ. ಯಾರಾದ್ರೂ ಸೋಂಕಿತರು ಆಸ್ಪತ್ರೆಗೆ ಬಂದ್ರೆ ಅವರನ್ನು ಗುಣಪಡಿಸುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕು. ಹೀಗಾಗಿ ರಾಜ್ಯ ವ್ಯಾಪಿ ಮಾಕ್ ಡ್ರಿಲ್ ಮಾಡಲಾಗುತ್ತಿದೆ ಎಂದರು.
ಮಾಸ್ಕ್ ಧರಿಸುವುದು ಕಡ್ಡಾಯ: BF.7 ತಳಿ ಹರಡುವ ಪ್ರಮಾಣ ಜಾಸ್ತಿಯಿದೆ. ಆದ್ರೆ ಅದರ ಗಂಭೀರತೆ ಬಹಳ ಕಡಿಮೆ ಇದೆ. ಜನಜಂಗುಳಿ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಗರ್ಭಿಣಿಯರು, ಚಿಕ್ಕ ಮಕ್ಕಳು ಎಚ್ಚರದಿಂದಿರಬೇಕು. ಆರೋಗ್ಯ ಸಮಸ್ಯೆ ಇದ್ದವರೂ ಹೆಚ್ಚು ಜನ ಇರುವ ಪ್ರದೇಶಗಳಿಂದ ದೂರ ಇದ್ರೆ ಒಳ್ಳೆಯದು ಎಂದು ಡಾ.ಸುಧಾಕರ್ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಗಮನ ಇಡುವಂತೆ ಸೂಚಿಸಿದೆ. ಆಯಾ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದವರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ನಾವು ಅಂದುಕೊಂಡಿದ್ದೇವೆ. ನಾವು ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ಎಚ್ಚರ ವಹಿಸುವಂತೆ ಸೂಚಿಸಿದ್ದೇವೆ. ನಾನು ಕೂಡ ಅಲ್ಲಿಗೆ ಒಂದು ಬಾರಿ ಭೇಟಿ ನೀಡಿ, ಅಲ್ಲಿನ ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.