ನಮ್ಮ ಸರ್ಕಾರ ಬಂದ್ರೆ ಕಬ್ಬಿಗೆ ಏಕರೂಪ ದರ ನಿಗದಿ: ರಾಹುಲ್ ಗಾಂಧಿ ಭರವಸೆ ಬೆಳಗಾವಿ:''ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ, ಕಬ್ಬಿಗೆ ಏಕರೂಪದ ದರ ನಿಗದಿ ಮಾಡಲಾಗುವುದು. ಅದು ಈಗಿರುವ ದರಕ್ಕಿಂತ ಅತಿ ಹೆಚ್ಚಾಗಿರುತ್ತದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ರಾಮದುರ್ಗ ಪಟ್ಟಣದಲ್ಲಿ ಸೋಮವಾರ ರೈತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ''ಕಬ್ಬು ಬೆಳೆ ದರ ಹೆಚ್ಚಳ ಮಾತ್ರವಲ್ಲ, ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿಯೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ರೈತರ ಆದಾಯ ದ್ವಿಗುಣ ಮಾಡಲು ಯತ್ನಿಸುತ್ತೇವೆ'' ಎಂದರು.
''ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಕೇವಲ 2,700 ರೂ. ದರ ನೀಡುತ್ತಿದ್ದು, ಯಾವುದಕ್ಕೂ ಸಾಲುವುದಿಲ್ಲ. ಪಂಜಾಬ್, ಹರಿಯಾಣಕ್ಕೆ ಹೋಲಿಸಿದರೆ ನಾವು 10 ವರ್ಷ ಹಿಂದಿದ್ದೇವೆ. ಹಾಗಾಗಿ, ಟನ್ ಕಬ್ಬಿಗೆ 5 ಸಾವಿರ ನೀಡುವಂತಾಗಬೇಕು'' ಎಂದು ರೈತ ಆನಂದ ಜಗತಾಪ ಕೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ''ನಿಮ್ಮ ಮಾತಿಗೆ ಸಹಮತವಿದೆ. ರೈತರು ಕೃಷಿಗೆ ವ್ಯಯಿಸುವ ವೆಚ್ಚ ಅಧಿಕವಾಗಿದೆ. ಆದಾಯದ ಪ್ರಮಾಣ ಕಡಿಮೆಯಾಗಿದೆ. ಕೃಷಿ ಪರಿಕರಗಳಿಗೂ ಜಿಎಸ್‌ಟಿ ವಿಧಿಸುವ ಮೂಲಕ ಬಿಜೆಪಿ ಸರ್ಕಾರ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಮುಂದಿನ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ, ಜಿಎಸ್‌ಟಿಯನ್ನು ಸಂಪೂರ್ಣ ಬದಲಿಸುತ್ತೇವೆ. ಐದು ತರಹದ ಜಿಎಸ್‌ಟಿ ತೆಗೆದುಹಾಕಿ, ಏಕರೂಪದ ಹಾಗೂ ಅತಿ ಕಡಿಮೆ ತೆರಿಗೆ ಜಾರಿಗೊಳಿಸುತ್ತೇವೆ'' ಎಂದರು.
''ಇದು ಜನರಿಂದ ಚುನಾಯಿತವಾದ ಸರ್ಕಾರವಲ್ಲ. ಹಣದಿಂದ ಶಾಸಕರನ್ನು ಖರೀದಿಸಿದ ಹಾಗೂ ಜನರನ್ನು ಲೂಟಿ ಮಾಡುತ್ತಿರುವ ಸರ್ಕಾರ. ಭ್ರಷ್ಟಾಚಾರದಲ್ಲಿ ಮುಳುಗಿರುವ ಶೇ.40 ಕಮಿಷನ್ ಸರ್ಕಾರವನ್ನು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 40 ಸೀಟುಗಳಿಗೆ ಸೀಮಿತಗೊಳಿಸಿ ಎಂದು ರಾಹುಲ್ ಗಾಂಧಿ ಕರೆ ನೀಡಿದರು.
ನಮ್ಮದು ರೈತ, ಕೂಲಿಕಾರ, ಯುವಕರ ಸರ್ಕಾರ ಆಗಲಿದೆ:''ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 150 ಸ್ಥಾನ ಗೆಲ್ಲಿಸಿ, ನಾವು ಸ್ಪಷ್ಟ ಬಹುತಮದಿಂದ ಸರ್ಕಾರ ರಚಿಸಲು ನೆರವಾಗಬೇಕು. ನಮ್ಮದು ರೈತರು, ಕೂಲಿಕಾರರು ಹಾಗೂ ಯುವಕರ ಸರ್ಕಾರವಾಗಲಿದೆ. ಇಂದು ರೈತರು, ಸಣ್ಣ–ಪುಟ್ಟ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ್ದಾರೆ. ಆದರೆ, ದೇಶದ ಸಂಪತ್ತು ಇಬ್ಬರು ಬಂಡವಾಳಶಾಹಿಗಳ ಪಾಲಾಗುತ್ತಿದೆ. ಅದಾನಿ ಮತ್ತು ಅಂಬಾನಿ ಲಕ್ಷ ಕೋಟಿ ಸಾಲ ಪಡೆದಿದ್ದಾರೆ. ಬ್ಯಾಂಕಿಗೆ ಹೋದ ತಕ್ಷಣ ಅವರಿಗೆ ಸಾಲ ಕೊಡಲಾಗುತ್ತಿದೆ. ಅದು ಮನ್ನಾ ಕೂಡ ಮಾಡಲಾಗುತ್ತಿದೆ. ಆದರೆ, ರೈತರ ಸಾಲಮನ್ನಾ ಮಾಡುತ್ತಿಲ್ಲ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದ್ದರೂ, ದೇಶದಲ್ಲಿ ಇಂಧನ ದರ ಕಡಿಮೆಯಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೇ ಕಡಿಮೆಯಿದೆ. ಆದರೆ, ದೇಶದಲ್ಲಿ ಇಂಧನ ದರ ಗಗನಕ್ಕೇರಿದೆ'' ಎಂದು ರಾಹುಲ್ ಗಾಂಧಿ ವಾಗ್ದಾಳಿ ಮಾಡಿದರು.
''ದೇಶದಲ್ಲಿ ರೈತರು ಹಾಗೂ ಯೋಧರ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರ ವಸ್ತುಗಳಿಗೂ ಜಿಎಸ್‌ಟಿ ವಿಧಿಸಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ'' ಎಂದು ರಾಹುಲ್ ಆರೋಪಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕಾರ್ಯದರ್ಶಿ ವಿಷ್ಣುನಾಥನ್, ವಿಶ್ವನಾಥ ಚವ್ಹಾಣ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಸೇರಿ ಮತ್ತಿತರರು ಇದ್ದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 3 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಆಯ್ದ ಹಲವರು ಕೃಷಿಗೆ ಸಂಬಂಧಿಸಿ ಪ್ರಶ್ನೆಗಳನ್ನು ರಾಹುಲ್ ಗಾಂಧಿ ಅವರಿಗೆ ಕೇಳಿದರು.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ಈ ಚುನಾವಣೆಯಲ್ಲಿ ಸೋಲ್ತಾರೆ: ಅಮಿತ್ ಶಾ ಭವಿಷ್ಯ