ಅಥಣಿ:ತಾಲೂಕಿನ ಕೋಕಟನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ಹೂಡಿಕೆಯಲ್ಲಿ, ಮೇ. ಸಾವ್ಸನ್ ಡಿಸ್ಟಿಲರ್ ಪ್ರೈವೇಟ್ ಲಿಮಿಟೆಡ್ ಇವರಿಂದ ಪ್ರಸ್ತಾಪಿತ 100 ಕೆಎಲ್ಪಿಡಿ ಸಾಮರ್ಥ್ಯದ ಇಥೆನಾಲ್ ಕಾರ್ಖಾನೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ಕಾರ್ಖಾನೆ ನಿರ್ಮಾಣ ವಿರೋಧಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕುಮಾರ್ ಅವರಿಗೆ ಗ್ರಾಮದ ಜನರು ಮನವಿ ಪತ್ರ ಸಲ್ಲಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಒಡೆತನದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಖಾನೆಗೆ ವಿರೋಧ ಇದೇ ವೇಳೆ ಗ್ರಾಮಸ್ಥೆ ಸುಂದರವ್ವ ಮುರಗ್ಯಾಗೋಳ ಮಾತನಾಡಿ, ನಮ್ಮ ಊರಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ನಮಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸವದಿ ಅವರ ಒಡೆತನದಿಂದ ನಿರ್ಮಾಣವಾಗುತ್ತಿರುವ ಈ ಕಾರ್ಖಾನೆಯಿಂದ ನಮಗೆ ಕುಡಿಯೋ ನೀರಿನ ತೊಂದರೆ ಆಗುತ್ತೆ. ಪಕ್ಕದ ರೇಣುಕಾ ಶುಗರ್ಸ್ ನಿಂದ ಗಾಳಿ ಮುಖಾಂತರ ಧೂಳು ಬರುವುದರಿಂದ ನಮ್ಮ ಮಕ್ಕಳ ಆರೋಗ್ಯ ಸ್ಥಿತಿ ಕೂಡ ಹದಗೆಡುತ್ತಿದೆ. ಬುಧವಾರ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ, ಬೇರೆ ಕಡೆಯ ಜನರನ್ನು ಕರೆತಂದು ಗ್ರಾಮಸ್ಥರೆಂದು ಅಧಿಕಾರಿಗಳ ಮುಂದೆ ತೋರಿಸಿದ್ದಾರೆ ಎಂದು ಆರೋಪಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ ಸವದಿ, ಅವರ ಸುಪುತ್ರ ಚಿದಾನಂದ ಸವದಿ ಇವರನ್ನು ಈಟಿವಿ ಭಾರತ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈಗ ಜನರು ಆರೋಪ ಮಾಡುವುದು ಸರಿಯಲ್ಲ. ಬುಧವಾರ ಸಾರ್ವಜನಿಕರೊಂದಿಗೆ ಅಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು. ಈ ಕುರಿತು ಮುಂಚಿತವಾಗಿಯೇ ಪತ್ರಿಕೆ ಮುಖಾಂತರ ಮಾಹಿತಿ ಕೂಡ ನೀಡಲಾಗಿತ್ತು. ಹೊರಗಿನ ಜನರು ಯಾರೂ ಸಭೆಗೆ ಬಂದಿರಲಿಲ್ಲ. ಅಕ್ಕಪಕ್ಕದ ಗ್ರಾಮಸ್ಥರು ಸೇರಿದ್ದರು. ಗ್ರಾಮಸ್ಥರು ಅಧಿಕಾರಿಗಳ ಮುಂದೆ ಈ ಕಾರ್ಖಾನೆಯಿಂದ ನಮಗೆ ಅನುಕೂಲ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ತಿಳಿಸಿದರು.