ಬೆಳಗಾವಿ: ಸಚಿವ ಜಮೀರ್ ಹೇಳಿಕೆ ವಿರೋಧಿಸಿ ಬಿಜೆಪಿ, ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯ ನೋಟಿಸ್ ನೀಡಿ ಚರ್ಚೆ ಮಾಡೋಣ. ನಾವು ಪಲಾಯನ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಭೋಜನ ವಿರಾಮದ ಬಳಿಕ ಪುನಾರಂಭವಾದ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತಮ್ಮ ಧರಣಿ ಮುಂದುವರಿಸಿದರು. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ, ಮಧ್ಯಪ್ರವೇಶ ಮಾಡಿದ ಸಿಎಂ, ಜಮೀರ್ ಹೇಳಿಕೆ ಸಂವಿಧಾನದ ಬಿಕ್ಕಟ್ಟು ಅಲ್ಲ. ನಮ್ಮ ಪಕ್ಷ ಸಂವಿಧಾನಕ್ಕೆ ಗೌರವ ಕೊಡುತ್ತೆ. ಸಂವಿಧಾನ ಬದ್ಧವಾಗಿ ಸರ್ಕಾರ ನಡೆಸೋರು ನಾವು ಎಂದರು.
ಬೆಳಗ್ಗೆ ಬಿಜೆಪಿಯವರು ಜಮೀರ್ ಹೇಳಿಕೆ ಪ್ರಸ್ತಾಪ ಮಾಡಿದ್ದಾರೆ. ನಾನು ಜಮೀರ್ ಜತೆ ಮಾತನಾಡಿದಾಗ, ನಾನು ಶಾಸಕರಿಗೆ ಚ್ಯುತಿ ಬರುವಂತೆ ಮಾತನಾಡಿಲ್ಲ, ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ. ಸ್ಪೀಕರ್ಗೆ ನಾವು ಗೌರವ ಕೊಡಬೇಕು, ಬಿಜೆಪಿಯವರೂ ಗೌರವ ಕೊಡಬೇಕು ಅಂತ ಹೇಳಿದೆ ಅಂದರು. ಜಮೀರ್ ಸ್ಪೀಕರ್ ಅಥವಾ ಶಾಸಕರ ಗೌರವಕ್ಕೆ ಕುಂದುಂಟು ಮಾಡುವ ಹೇಳಿಕೆ ಕೊಟ್ಟಿಲ್ಲ ಅಂದಿದ್ದಾರೆ. ಬಿಜೆಪಿ, ಜೆಡಿಎಸ್ ಅವರಿಗೆ ಚ್ಯುತಿ ಬಂದಿದ್ದರೆ ಅಧಿವೇಶನದ ಮೊದಲ ವಾರವೇ ಯಾಕೆ ಧರಣಿ ಮಾಡಲಿಲ್ಲ? ಎಂದು ಪ್ರಶ್ನಿಸಿದರು.