ಬೆಳಗಾವಿ:ಕೃಷ್ಣಾ, ಮಹಾದಾಯಿ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನ ಕುರಿತು ಚರ್ಚಿಸಲು ಸಾರ್ವಜನಿಕ ಜರೂರು ಆದ್ಯತೆ ಮೇಲೆ ಅವಕಾಶ ಕಲ್ಪಿಸಬೇಕು ಎಂದು ಜೆಡಿಎಸ್ ಮಂಡಿಸಿದ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ತಿನ ಶೂನ್ಯವೇಳೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡರು ನೀರಾವರಿ ಯೋಜನೆಗಳ ಕುರಿತು ಚರ್ಚೆಗೆ ಅನುಮತಿ ಕೋರಿದರು ವಿಧಾನ ಪರಿಷತ್ತಿನ ಶೂನ್ಯವೇಳೆ ಕಲಾಪದ ನಂತರ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಸೇರಿದಂತೆ ಹಲವರು ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಅನುಮತಿ ಕೋರಿ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದರು.
ವಿಷಯದ ಮೇಲೆ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕಂಠೇಗೌಡ, ಕೃಷ್ಣಾ ಮೇಲ್ದಂಡೆ ಯೋಜನೆ ಬಹಳ ದೊಡ್ಡ ಯೋಜನೆಯಾಗಿದೆ. ಅಂತಿಮ ತೀರ್ಪು ಬಂದಿದ್ದರೂ ಮೂರನೇ ಹಂತದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಆಗಿಲ್ಲ. ಇದು ಆಗಬೇಕು ಎನ್ನುವುದು ಈ ಭಾಗದ ಜನರ ನಿರೀಕ್ಷೆಯಾಗಿದೆ.
ಅದೇ ರೀತಿ ಮಹಾದಾಯಿ ಯೋಜನೆ ಬಗ್ಗೆಯೂ ತೀರ್ಮಾನ ಬಂದಿದೆ. ಸಣ್ಣ ರಾಜ್ಯ ಗೋವಾದ ತಕರಾರಿಗೆ ಯೋಜನೆ ಅನುಷ್ಠಾನ ಮಾಡಲಾಗಿಲ್ಲ. ಮಹಾದಾಯಿ ಯೋಜನೆ ಪೂರ್ಣಗೊಳಿಸುವ ತೀರ್ಮಾನ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಕೆಲಸವಾಗಬೇಕಿದೆ ಎಂದರು.
ಮೇಕೆದಾಟು ಯೋಜನೆಗೆ ಡಿಪಿಆರ್
ಕಾವೇರಿ ಕೊಳ್ಳದ ಮೇಕೆದಾಟ ಯೋಜನೆಯೂ ನೆನೆಗುದಿಗೆಗೆ ಬಿದ್ದಿದೆ. ಈ ವರ್ಷ ಸಾಕಷ್ಟು ಮಳೆಯಾಯಿತು. ನಾವು ಹಾಗೂ ತಮಿಳುನಾಡು ಎರಡೂ ರಾಜ್ಯದವರು ಹೆಚ್ಚುವರಿ ನೀರು ಹಿಡಿದುಕೊಳ್ಳಲಾಗಲಿಲ್ಲ. ಎಲ್ಲಾ ಸಮುದ್ರಕ್ಕೆ ಹರಿದು ಹೋಯಿತು. ಎರಡು ರಾಜ್ಯದ ಸಮಸ್ಯೆಗೆ ಮೇಕೆದಾಟು ಪರಿಹಾರವಾಗಲಿದೆ. ಈ ಯೋಜನೆಗೆ ಡಿಪಿಆರ್ ಆಗಿದೆ.
ಆದರೂ ಕೇಂದ್ರದ ಅನುಮತಿ ಪಡೆದು ಯೋಜನೆ ಕೈಗೆತ್ತಿಕೊಳ್ಳಲು ಆಗಿಲ್ಲ. ಎತ್ತಿನ ಹೊಳೆ ಯೋಜನೆಯೂ ಆಗಿಲ್ಲ. ಎಂಟು ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೂಡಲೇ ಈ ಯೋಜನೆ ಅನುಷ್ಠಾನಕ್ಕೆ ತರಬೇಕಿದೆ ಎನ್ನುವ ಪ್ರಸ್ತಾಪ ಮಾಡಿದರು.
ರಾಜ್ಯದಲ್ಲಿ ಈ ವರ್ಷ 200 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ನೀರಾವರಿ ಯೋಜನೆ ಆದಲ್ಲಿ ಇಂತಹ ಸಮಸ್ಯೆ ತಪ್ಪುತ್ತದೆ ಅದಕ್ಕಾಗಿ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದಿ ಮನವಿ ಮಾಡಿದರು.
ಶ್ರೀಕಂಠೇಗೌಡ ಸೇರಿದಂತೆ ಇತರ ಸದಸ್ಯರು ಮಂಡಿಸಿದ ನಿಲುವಳಿ ಸೂಚನೆಯನ್ನು ನಿಯಮ 68 ಕ್ಕೆ ಬದಲಾಯಿಸಿ ರೂಲಿಂಗ್ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆಗೆ ಅವಕಾಶ ನೀಡಿ ಸಮಯ ನಿಗದಿಪಡಿಸುವುದಾಗಿ ಪ್ರಕಟಿಸಿದರು.
ಇದನ್ನೂ ಓದಿ: ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಪ್ರವೇಶಕ್ಕೆ ಪೊಲೀಸರ ಅಡ್ಡಿ: ಹಕ್ಕುಚ್ಯುತಿ ಮಂಡಿಸಿದ ಕಾಂಗ್ರೆಸ್