ಕರ್ನಾಟಕ

karnataka

ETV Bharat / state

ನೀನು ಮುಖ್ಯಮಂತ್ರಿ ಆಗಲೇಬೇಕು ಎಂದಿದ್ದರು, ಆದಾಗ ತುಂಬಾ ಖುಷಿಪಟ್ಟರು.. ಆರ್‌ ಜಾಲಪ್ಪರ ಗುಣಗಾನ ಮಾಡಿದ ಸಿದ್ದರಾಮಯ್ಯ

ಅನಾರೋಗ್ಯದಿಂದ ನಿಧನರಾದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​​ನ ಹಿರಿಯ ಮುಖಂಡ ಆರ್.‌ಎಲ್ ಜಾಲಪ್ಪ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು..

Siddaramaiah's speech on Jalappa in Assembly
ವಿಧಾನಸಭೆಯಲ್ಲಿ ಜಾಲಪ್ಪ ಕುರಿತಂತೆ ಸಿದ್ದರಾಮಯ್ಯ ಭಾಷಣ

By

Published : Dec 20, 2021, 3:50 PM IST

ಬೆಳಗಾವಿ :ನಾನು ಕಾಂಗ್ರೆಸ್​ ಪಕ್ಷ ಸೇರಲು ಆರ್​ ಎಸ್​​ ಜಾಲಪ್ಪ ಮತ್ತು ಅಹ್ಮದ್ ಪಟೇಲ್ ಕಾರಣ. ಜಾಲಪ್ಪನವರು ಈ ಕುರಿತಾಗಿ ಸೋನಿಯಾಗಾಂಧಿಯವರಿಗೆ ಪತ್ರ ಬರೆದಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಜಾಲಪ್ಪ ಕುರಿತಂತೆ ಸಿದ್ದರಾಮಯ್ಯ ಭಾಷಣ ಮಾಡಿರುವುದು..

ವಿಧಾನಸಭೆಯಲ್ಲಿ ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಅವರು, ನೀವು ಮುಖ್ಯಮಂತ್ರಿಯಾಗಲೇಬೇಕೆಂದು ಜನತಾ ಪರಿವಾರದಲ್ಲಿ ಇದ್ದಾಗಲೇ ಜಾಲಪ್ಪನವರು ಪ್ರತಿಪಾದಿಸಿದ್ದರು. ನಾನು‌ ದೆಹಲಿಯಲ್ಲಿದ್ದಾಗ ಸೋಮಣ್ಣ ಕೂಡ ಮುಖ್ಯಮಂತ್ರಿಯಾಗಬೇಕೆಂದು 87 ಜನರ ಸಹಿ ಹಾಕಿಸಿದ್ದರು. ಈಗ ಅವರು ಬೇರೆ ಹೋಗಿ ಬಿಟ್ಟವರೆ ಎಂದು ಸೋಮಣ್ಣನವರ ಕಾಲೆಳೆದರು.

ನಾನು ಸಿಎಂ ಆದಮೇಲೆ ಮನೆಗೆ ಕರೆಯುತ್ತಿದ್ದರು.‌ ಅವರ ಮನೆಯಲ್ಲಿ ಊಟ ಹಾಕಿ‌ ಕಳಿಸುತ್ತಿದ್ದರು. ಅಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬಂದರೆ ಮನೆಯವರೆಲ್ಲ ಅಧಿಕಾರ ನಡೆಸುವುದಕ್ಕೆ ಬರುತ್ತಾರೆ. ಆದರೆ, ಜಾಲಪ್ಪನವರು ಮನೆಯವರನ್ನು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಅಧಿಕಾರದಿಂದ ಬಹಳ ದೂರ ಇಟ್ಟಿದ್ದರು. ಅವರ ಆದರ್ಶ ಇಂದಿಗೂ ಎಲ್ಲರಿಗೂ ಮಾದರಿ ಎಂದರು.

ನನ್ನ ಬಳಿ ಒಂದು ರೂಪಾಯಿ‌ ಇಲ್ಲದಿದ್ದರೂ ದೇವರಾಜ ಅರಸು ಮೆಡಿಕಲ್ ಕಾಲೇಜ್ ಟ್ರಸ್ಟ್​ಗೆ ಜಾಲಪ್ಪನವರು ಪೌಂಡರ್ ಸದಸ್ಯರನ್ನಾಗಿ ಮಾಡಿದ್ದರು. ನಾನು ಆ ಸಭೆಗಳಿಗೆ ಹೋಗದ ಕಾರಣ ನನ್ನನ್ನು ತೆಗೆದು ಹಾಕಿದ್ದರು. ಈಗ ನನ್ನ ಮಗನನ್ನು ಟ್ರಸ್ಟಿ ಮಾಡಿದ್ದಾರೆ ಎಂದರು.

ಕೋಲಾರದಲ್ಲಿ ಅಹಿಂದ ಮೊದಲು ಆರಂಭವಾಯಿತು. ನಂತರ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶಕ್ಕೆ ಬಸವರಾಜ ಬೊಮ್ಮಾಯಿ ಕೂಡ ಬಂದಿದ್ದರು. ಆಗ ನನಗೂ, ಅವರಿಗೂ ಸ್ನೇಹ ತುಂಬಾ ಚೆನ್ನಾಗಿತ್ತು. ಈಗಲೂ ಚೆನ್ನಾಗಿದೆ. ಆದರೆ, ಬೇರೆ ಬೇರೆ ಪಾರ್ಟಿಯಲ್ಲಿದ್ದೇವೆ. ಅದೇ ಬಂದಿರೋದು ತಾಪತ್ರಯ ಎಂದೇಳಿದರು.

ಜಾಲಪ್ಪನವರು ದೀರ್ಘ ಕಾಲ ರಾಜಕಾರಣದಲ್ಲಿದ್ದವರು. ನೀವು ನೂರು ವರ್ಷ ಇರುತ್ತೀರಾ ಎಂದು ನಾನು ಅವರಿಗೆ ಹೇಳಿದ್ದೆ. ಆದರೆ, ಅವರು 'ಏ ನೂರು ವರ್ಷ ಬೇಡ, ಕೊನೆ ಕ್ಷಣದಲ್ಲಿ ಕಷ್ಟ ಆಗುತ್ತದೆ. ಚೆನ್ನಾಗಿ ಇರುವಾಗಲೇ ಹೊರಟು ಬಿಡಬೇಕು' ಎಂದು ಜಾಲಪ್ಪನವರು ಆಡಿದ ಮಾತುಗಳನ್ನು ನೆನಪಿಸಿಕೊಂಡರು.

ಆರಂಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಜಾಲಪ್ಪನವರು, ಆ ಕ್ಷೇತ್ರದಲ್ಲಿ ವ್ಯಾಪಕವಾಗಿ ಸಾಧನೆ ಮಾಡಿದರು. ದೇವರಾಜ ಅರಸು ಅವರನ್ನು ಗುರುತಿಸಿ ಮೇಲ್ಮನೆ ಸದಸ್ಯರನ್ನಾಗಿ ಮಾಡಿದರು. ಸಹಕಾರ ಹಾಗೂ ಗೃಹ ಸಚಿವರೂ ಸಹ ಆಗಿದ್ದರು‌. ರಾಜಕಾರಣದಲ್ಲಿ ನನಗೆ ದೊಡ್ಡ ಹಿತೈಷಿಗಳು ಎಂದು ಯಾರಾದರೂ ಇದ್ದರೆ ಅದು ಜಾಲಪ್ಪನವರು ಎಂದೇಳಿದರು.

ಇದನ್ನೂ ಓದಿ: ಬೆಳಗಾವಿಯ ಅಧಿವೇಶನದಲ್ಲಿ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ : ಸಚಿವ ಸಂಪುಟ ತೀರ್ಮಾನ

ABOUT THE AUTHOR

...view details