ಬೆಳಗಾವಿ : ಸಚಿವ ಜಮೀರ್ ಅಹಮದ್ ಖಾನ್ ಈ ಹೇಳಿಕೆ ಅದೊಂದು ಕಪ್ಪು ಚುಕ್ಕೆಯಾಗಿದೆ. ಅ ಹೇಳಿಕೆಯಿಂದ ಪೀಠಕ್ಕೆ ಅಗೌರವ ತಂದಿದೆ ಎಂದು ಸಚಿವ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನ ಅನ್ನೋದು ನ್ಯಾಯಾಧೀಶರ ಸ್ಥಾನ. ಆ ಸ್ಥಾನಕ್ಕೆ ವಿಶೇಷವಾದ ಗೌರವ ಇದೆ. ಪೂಜನೀಯ ಸ್ಥಳ ಅದು. ಸ್ಪೀಕರ್ ಬಂದ ತಕ್ಷಣ ಎದ್ದು ನಿಂತು ನಮಸ್ಕಾರ ಹಾಕುತ್ತೇವೆ. ಆದರೆ, ಜಮೀರ್ ಅಹಮದ್ ಮುಸ್ಲಿಮರ ಸಭೆಯಲ್ಲಿ ಅವರು ಆ ಸ್ಥಾನದಲ್ಲಿ ಕುಳಿತ ಮೇಲೆ ಬಿಜೆಪಿ ನಾಯಕರು ಅವರಿಗೆ ನಮಸ್ಕಾರ ಹಾಕುವಂತೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಹಿಂದೂ ಹಾಗೂ ಮುಸ್ಲಿಂ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ಅದು ಎಂದು ಕಿಡಿಕಾರಿದರು.
ನಾವು ಧರಣಿ, ಹೋರಾಟ ಮಾಡಿದರೂ ಸ್ಪೀಕರ್ ಅವರು ಸಚಿವ ಜಮೀರ್ ಹೇಳಿಕೆ ತಪ್ಪು ಅಂತಾ ಹೇಳಿಲ್ಲ. ಇದು ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಸ್ಪೀಕರ್ ಪೀಠಕ್ಕೆ ಅಗೌರವ ತಂದಿದೆ. ಇದೊಂದು ಕಪ್ಪು ಚುಕ್ಕೆ ಆಗಿದೆ. ಸಚಿವ ಜಮೀರ್ ಮೇಲೆ ಎಫ್ಐಆರ್ ದಾಖಲಿಸಬೇಕಿತ್ತು. ಸ್ಪೀಕರ್ ಆ ಸ್ಥಾನದ ಗೌರವವನ್ನು ಎತ್ತಿ ಹಿಡಿಯಬೇಕು. ಆದರೆ, ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ.
ಬಿಲ್ಗಳನ್ನು ಚರ್ಚೆ ಇಲ್ಲದೇ ಪಾಸ್ ಮಾಡಲಾಗಿದೆ. ಪ್ರಜಾಪ್ರಭುತ್ವ ದಮನ ಮಾಡಲು ಮುಂದಾಗಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ಒಂದು ವಾರ ವಿಸ್ತರಣೆ ಮಾಡಿ. ಎಲ್ಲ ಜಿಲ್ಲೆಗಳ ಬಗ್ಗೆ ವಿಸ್ತೃತ ವಾಗಿ ಚರ್ಚೆ ಮಾಡಲಿ. 10 ಸಾವಿರ ಕೋಟಿ ಮೌಲ್ವಿಗಳಿಗೆ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅಂದಿದ್ದಾರೆ. ವಿವಿಧ ರೀತಿಯಲ್ಲಿ ಶುಲ್ಕವನ್ನು ಹೆಚ್ಚಿಸುತ್ತಿದ್ದಾರೆ. ಚ್ಯಾರಿಟಬಲ್ಗೆ ಹಣ ಹೆಚ್ಚು ಮಾಡುತ್ತಿದ್ದಾರೆ. ಮುದ್ರಾಂಕ ಶುಲ್ಕು ಹೆಚ್ಚು ಮಾಡುತ್ತಿದ್ದಾರೆ. ಆ ಮೂಲಕ 2,000 ಕೋಟಿ ರೂ. ಸಂಗ್ರಹ ಮಾಡುತ್ತಿದ್ದಾರೆ. ಮೌಲ್ವಿಗಳಿಗೆ ಕೊಡಲು ಈ ರೀತಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಇದು ಕರಾಳ ದಿನ- ಬಿ.ವೈ ವಿಜಯೇಂದ್ರ :ಸಚಿವ ಜಮೀರ್ ಅಹಮದ್ ಪ್ರಕರಣದಲ್ಲಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಇಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ. ಸಚಿವ ಜಮೀರ್ ಹೇಳಿಕೆ ಬಂದ 24 ತಾಸಿನಲ್ಲಿ ಅವರ ರಾಜೀನಾಮೆ ಕೇಳುತ್ತಾರೆ ಅಂದು ಕೊಂಡಿದ್ದೆವು. ಆದರೆ ಅದು ಆಗಿಲ್ಲ. ಸ್ಪೀಕರ್ ಈ ವಿಚಾರವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂದು ಕೊಂಡಿದ್ದೆವು. ಅದೂ ಆಗಿಲ್ಲ. ಇದೊಂದು ಕರಾಳ ದಿನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಜಮೀರ್ನ್ನು ಉಚ್ಛಾಟನೆ ಮಾಡಬೇಕಿತ್ತು-ಯತ್ನಾಳ್ :ಜಮೀರ್ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಸ್ಪೀಕರ್ ಅವರು ಪೀಠಕ್ಕೆ ಬಂದಾಗ ಎಲ್ಲರೂ ಗೌರವ ಕೊಡುತ್ತೇವೆ. ಅದು ಅಂಬೇಡ್ಕರ್ ಸಂವಿಧಾನ ಹೇಳಿದೆ. ಆದ್ರೆ ಸ್ಪೀಕರ್ ಸ್ಥಾನವನ್ನು ಒಂದು ಜಾತಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಜಮೀರ್ ಹೇಳಿಕೆ ತಪ್ಪು ಅಂತ ಒಂದು ಮಾತು ಸ್ಪೀಕರ್ ಹೇಳಿಲ್ಲ. ಅದು ತಪ್ಪು ಎಂದು ಜಮೀರ್ ರನ್ನು ಉಚ್ಚಾಟನೆ ಮಾಡಬೇಕಿತ್ತು. ಉಚ್ಚಾಟನೆ ಮಾಡಿದರೇ ಸ್ಪೀಕರ್ ಗೌರವ ಹೆಚ್ಷಾಗುತಿತ್ತು. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಬಸನಗೌಡ ಯತ್ನಾಳ್ ತಿಳಿಸಿದರು.
370 ವಿಧಿ ರದ್ದು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಭಾರತೀಯ ಜನಸಂಘದ ಮೊದಲ ರಾಷ್ಟ್ರೀಯ ಅಧ್ಯಕ್ಷ ಶಾಮ್ ಪ್ರಸಾದ್ ಮುಖರ್ಜಿ ಕಾಶ್ಮೀರದ ಶ್ರೀನಗರದಲ್ಲಿ ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಹಾಗೂ ಎರಡು ಸಂವಿಧಾನ ಇರಲು ಅಸಾಧ್ಯ ಎಂದಿದ್ದರು. ಜವಹರಲಾಲ್ ನೆಹರೂ ತಮ್ಮ ಸ್ವಾರ್ಥಕ್ಕಾಗಿ ಮತ್ತು ಮುಸ್ಲಿಮರ ಓಲೈಕೆಗಾಗಿ 370 ವಿಧಿ ಜಾರಿ ಮಾಡಿದ್ದರು. ಅದರಂತೆ ಜಮ್ಮು ಕಾಶ್ಮೀರದಲ್ಲಿ ಮೀಸಲಾತಿ ಇರಲಿಲ್ಲ. ದಲಿತರಿಗೆ ಶಾಸಕ ಆಗಲು ಆಗುತ್ತಿರಲಿಲ್ಲ. ಇವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧೈರ್ಯದ ನಡೆಯಿಂದ 370 ವಿಧಿ ರದ್ದು ಮಾಡಲಾಗಿದೆ.
ಇದನ್ನು ಪ್ರಶ್ನೆ ಮಾಡಿ ಲೋಕಸಭಾ ಸದಸ್ಯರೊಬ್ಬರು ಸುಪ್ರೀಂ ಕೋರ್ಟ್ ಹೋಗಿದ್ದರು. ಆ ಸಂಸದ ಪಾಕಿಸ್ತಾನದ ಏಜೆಂಟ್ ನಂತೆ ವರ್ತಿಸುತ್ತಿದ್ದರು. ಇವಾಗ ಸುಪ್ರೀಂ ಕೋರ್ಟ್ 370 ವಿಧಿ ರದ್ದತಿಯನ್ನು ಮಾನ್ಯ ಮಾಡಿದೆ. ಎಲ್ಲರೂ ಒಂದೇ ಸಂವಿಧಾನದ ಅಡಿ ಇರಬೇಕು ಎಂದಿದೆ. ಇದಕ್ಕೆ ಕೃತಜ್ಞತೆಗಳು ಎಂದರು.
ಇದನ್ನೂ ಓದಿ :ಜಮೀರ್ ಹೇಳಿಕೆ ಖಂಡಿಸಿ ವಿಪಕ್ಷಗಳಿಂದ ಧರಣಿ: ಬಿಜೆಪಿಯವರು ಜನ ವಿರೋಧಿಗಳು ಎಂದ ಸಿಎಂ