ಬೆಳಗಾವಿ: ಸಮನ್ವಯತೆ ಕೊರತೆಯಿಂದ ನಿನ್ನೆ ಸದನದಲ್ಲಿ ಗೊಂದಲ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ನಡೆದ ಘಟನೆ ಬಗ್ಗೆ ಮಾಧ್ಯಮದಲ್ಲಿ ಗೊಂದಲ ಎಂದು ಸುದ್ದಿಯಾಗಿದೆ. ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರದಿಂದ ಉತ್ತರ ಕರ್ನಾಟಕ ವಿಚಾರ ಚರ್ಚೆಗೆ ಬರಬೇಕಿತ್ತು. ಆದರೆ ಧರಣಿಯಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಮತ್ತೆ ನೀವು ಧರಣಿ ಮಾಡಿದರೆ ಅವಕಾಶ ಸಿಗಲ್ಲ. ಸಭಾತ್ಯಾಗ ಮಾಡಬೇಕು ಎಂದು ಅವರೇ ನನ್ನ ಬಳಿ ಬಂದು ಚರ್ಚೆ ಮಾಡಿದ್ದರು ಎಂದು ಸ್ಪಷ್ಟಪಡಿಸಿದರು.
ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು, ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಆಗ್ತಿಲ್ಲ. ನೀವು ಸದನದ ಬಾವಿಗೆ ಇಳಿದರೂ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು ಎಂದಿದ್ದರು. ಉತ್ತರ ಕರ್ನಾಟಕ ಬಗ್ಗೆ ನಾನು ಮಾತಾಡಬೇಕು. ಹೀಗಾಗಿ ಧರಣಿ ಬೇಡಾ ಅಂತಾ ಯತ್ನಾಳ ಹೇಳಿದ್ದರು. ಆಗ ನಾನು ಅದಕ್ಕೆ ಮುಂದಿರೋರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದೆ ಇದ್ದವರು ಮತ್ತು ಮುಂದೆ ಇದ್ದವರ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ಸಣ್ಣ ಗೊಂದಲ ಆಗಿದೆ ಅಷ್ಟೇ:ಬೆಳಗಾವಿ ಪೊಲೀಸರ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಮಾತಕತೆ ನಡೆಸಿದ್ದೆವು. ನಾವು, ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಅಶ್ವತ್ ನಾರಾಯಣ್ ಅವರು ಸೇರಿ ಎಲ್ಲರೂ ಈ ಬಗ್ಗೆ ತೀರ್ಮಾನ ಮಾಡಿದ್ದೆವು. ಆದರೆ ನಮ್ಮ ತೀರ್ಮಾನ ಹಿಂದಿನ ಸಾಲಿನಲ್ಲಿ ಇದ್ದವರಿಗೆ ತಲುಪಿಸಿಲ್ಲ. ಸಮನ್ವಯತೆ ಕೊರತೆ ಇರೋದ್ರಿಂದ ಆ ರೀತಿ ಆಗಿದೆ ಎಂದು ತಿಳಿಸಿದರು.