ಬೆಳಗಾವಿ:ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗೋವಾದಲ್ಲಿ ಠಿಕಾಣಿ ಹೂಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿವೆ. ಈ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೂ ಗೋವಾಗೆ ಹೋಗಲು ಸೂಚನೆ ನೀಡಿದೆ.
ಗೋವಾ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಬರುವವರೆಗೆ ಅಲ್ಲೇ ಇರಬೇಕು. ಫಲಿತಾಂಶ ಅತಂತ್ರವಾಗಿ ಅದರ ಲಾಭ ಪಡೆಯುವ ಅವಕಾಶವಿದ್ದರೆ, ಅದನ್ನು ಬಳಸಿಕೊಂಡು ಪಕ್ಷ ಅಧಿಕಾರಕ್ಕೆ ತರಲು ಬೇಕಾದ ಪ್ರಯತ್ನ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ.
ಗೋವಾ ಚುನಾವಣೆಯಲ್ಲಿ ಅನೇಕ ರಣತಂತ್ರ ರೂಪಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನಪಟ್ಟಿದ್ದರು. ಇದರಿಂದ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರಿಗೆ ಆನೆ ಬಲ ಬಂದಂತೆ ಆಗಿತ್ತು. ಮಂಗಳವಾರ ಬೆಂಗಳೂರಿನಿಂದ ನೇರವಾಗಿ ಗೋವಾಗೆ ತೆರಳಿದ ಸತೀಶ್ ಜಾರಕಿಹೊಳಿ 2017ರಲ್ಲಿ ಆದ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತಿದ್ದಾರೆ.
ಇದನ್ನೂ ಓದಿ:ಆರ್ಥಿಕ ನಿರ್ಬಂಧ ಬಳಿಕ ಮತ್ತೊಂದು ಶಾಕ್; ರಷ್ಯಾದಿಂದ ತೈಲ, ಅನಿಲ ಆಮದಿಗೆ ಅಮೆರಿಕ ನಿಷೇಧ