ಬೆಳಗಾವಿ :ಭಾಷಾಧಾರಿತ ಚುನಾವಣೆಗೆ ಸಾಕ್ಷಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಈ ಸಲ ಪಕ್ಷಾಧಾರಿತವಾಗಿ ಚುನಾವಣೆ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಆಮ್ ಆದ್ಮಿ ಪಕ್ಷ ಹಾಗೂ ಎಂಐಎಂ ಕೂಡ ಕಣಕ್ಕಿಳಿದಿವೆ.
ಇಷ್ಟು ದಿನ ಪಾಲಿಕೆಯಲ್ಲಿ ಹಿಡಿತ ಸಾಧಿಸಿದ್ದ ಎಂಇಎಸ್ ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ಧೂಳೀಪಟವಾಗಿದೆ. 58 ವಾರ್ಡ್ಗಳ ಪೈಕಿ ಕೇವಲ 21ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಡದ್ರೋಹಿಗಳು ಗಡಿಭಾಗದಲ್ಲಿ ನೆಲಕಚ್ಚಿದ್ದಾರೆ.
ಎಂಇಎಸ್ಗೆ ಶಾಕ್ ಕೊಟ್ಟ ರಾಷ್ಟ್ರೀಯ ಪಕ್ಷಗಳು :ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳು ಬೆಳಗಾವಿ ಪಾಲಿಕೆ ಚುನಾವಣೆಗೆ ರಂಗ ಪ್ರವೇಶ ಮಾಡಿವೆ. 58 ವಾರ್ಡ್ ಪೈಕಿ ಬಿಜೆಪಿ 55 ಹಾಗೂ ಕಾಂಗ್ರೆಸ್ 45 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇನ್ನು, ದೆಹಲಿ ಸರ್ಕಾರದ ಮಾದರಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಆಪ್ 28 ವಾರ್ಡ್ ಹಾಗೂ ಅಸಾದುದ್ದೀನ್ ಓವೈಸಿ ನೇತೃತ್ವದ ಎಂಐಎಂ 6+1 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿವೆ.
ಕರ್ನಾಟಕದ ಪರ ಇರುವ ಮರಾಠಾ ಸಮುದಾಯದ ಬಹುತೇಕ ಅಭ್ಯರ್ಥಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದಾರೆ. ಗಡಿಭಾಗದಲ್ಲಿ ಭಾಷೆ, ಗಡಿ ವಿವಾದದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಎಂಇಎಸ್ ಮುಖಂಡರಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಮೊದಲು 58 ವಾರ್ಡ್ಗಳಲ್ಲಿ ಸ್ಪರ್ಧಿಸುತ್ತಿದ್ದ ಎಂಇಎಸ್ ಈ ಸಲ ಅಭ್ಯರ್ಥಿಗಳಿಲ್ಲದೇ ನೆಲಕಚ್ಚಿದೆ.
ಇದನ್ನೂ ಓದಿ:ಪಾಲಿಕೆ ಚುನಾವಣೆಯಲ್ಲಿ AIMIM ಸ್ಪರ್ಧೆ: ಬೆಳಗಾವಿಗೆ ಆಗಮಿಸಿದ ಓವೈಸಿ
ಮಹಾ ನಾಯಕರಿಗೂ ಬೇಡ ಎಂಇಎಸ್ :ಅಭಿವೃದ್ಧಿ ಬಿಟ್ಟು ಕೇವಲ ಭಾಷೆ ಹೆಸರಲ್ಲಿ ರಾಜಕೀಯ ಮಾಡುವ ಸ್ಥಳೀಯ ಎಂಇಎಸ್ ಕಾರ್ಯಕರ್ತರ ವರ್ತನೆ ಮಹಾರಾಷ್ಟ್ರ ನಾಯಕರಿಗೂ ಬೇಸರ ತರಿಸಿದೆ. ಇಷ್ಟು ದಿನ ಎಂಇಎಸ್ ಕೈಯಲ್ಲಿ ಪಾಲಿಕೆ ಚುಕ್ಕಾಣಿ ಇದ್ದರೂ ನಗರದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ನಾಡದ್ರೋಹಿ ಚಟುವಟಿಕೆಗೆ ಆದ್ಯತೆ ನೀಡುವ ಮೂಲಕ ನಗರದಲ್ಲಿ ವಾಸವಾಗಿರುವ ಮರಾಠಾ ಭಾಷಿಕರ ಮನಸಿನಿಂದಲೂ ಮಹಾರಾಷ್ಟ್ರ ಏಕೀಕರಣ್ ಸಮಿತಿ ದೂರವಾಗಿದೆ.
ಹೀಗಾಗಿ, ಚುನಾವಣಾ ಪ್ರಚಾರ ಆರಂಭವಾಗಿದ್ದರೂ ಮಹಾರಾಷ್ಟ್ರದ ಯಾವೊಬ್ಬ ನಾಯಕನೂ ಪ್ರಚಾರಕ್ಕೆ ಬಂದಿಲ್ಲ. ಪ್ರಚಾರಕ್ಕೆ ಬರುವಂತೆ ಇಲ್ಲಿನ ನಾಯಕರು ಶಿವಸೇನೆ ವಕ್ತಾರ ಸಂಜಯ್ ರಾವತ್ ಹಾಗೂ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ಹಲವು ನಾಯಕರನ್ನು ಆಹ್ವಾನಿಸಿತ್ತು. ಆದರೆ, ಎಂಇಎಸ್ ಸ್ಥಳೀಯ ನಾಯಕರ ಮನವಿಗೆ ಮಹಾ ನಾಯಕರು ಸ್ಪಂದಿಸಿಲ್ಲ. ಇದು ಎಂಇಎಸ್ ಹಿನ್ನಡೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ:ಬೆಳಗಾವಿ ಪಾಲಿಕೆ ಚುನಾವಣೆ: ಸವದಿ ನಿವಾಸಕ್ಕೂ ತೆರಳಿ ಮತಯಾಚಿಸಿದ ಕಾರಜೋಳ
ರಾಷ್ಟ್ರೀಯ ಪಕ್ಷಗಳ ಅಬ್ಬರ :ಈ ಚುನಾವಣೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಪ್ರತಿವಾರ್ಡ್ಗೆ ಬಿಜೆಪಿ ಓರ್ವ ಶಾಸಕ ಹಾಗೂ ಬಿಬಿಎಂಪಿ ಸದಸ್ಯರನ್ನು ನೇಮಿಸಿದೆ. ಅಲ್ಲದೆ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಕೆ ಎಸ್ ಈಶ್ವರಪ್ಪ, ಶ್ರೀರಾಮುಲು, ಮುರುಗೇಶ ನಿರಾಣಿ, ಬೈರತಿ ಬಸವರಾಜ್ ಸೇರಿ ಹಲವು ಸಚಿವರು ಪ್ರಚಾರಕ್ಕೆ ಬರುತ್ತಿದ್ದಾರೆ.
ಇನ್ನು, ಕಾಂಗ್ರೆಸ್ ಪರ ಮಾಜಿ ಸಚಿವರಾದ ಎಂ ಬಿ ಪಾಟೀಲ, ಸತೀಶ್ ಜಾರಕಿಹೊಳಿ, ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಕೂಡ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಎಂಇಎಸ್, ಎಂಐಎಂ ಜತೆಗೆ ಕೈಜೋಡಿಸುವ ಮೂಲಕ ಮಹಾರಾಷ್ಟ್ರ ನಾಯಕರ ಕಂಗೆಣ್ಣಿಗೆ ಗುರಿಯಾಗಿದೆ. ಹೀಗಾಗಿ, ಎಂಇಎಸ್ನಿಂದ ಕಣಕ್ಕಿಳಿದ ಅಭ್ಯರ್ಥಿಗಳು ಕೂಡ ಸ್ಥಳೀಯ ಎಂಇಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.