ಬೆಳಗಾವಿ/ಬೆಂಗಳೂರು: "ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಬದಲು ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಕುರಿತು ರಚಿಸಲಾಗಿರುವ ಏಕಸದಸ್ಯ ಸಮಿತಿಯನ್ನು ಇನ್ನು 10 ದಿನಗಳಲ್ಲಿ ಪುನರ್ ರಚಿಸಲಾಗುತ್ತದೆ. ಹೆಚ್ಚುವರಿ ಅಧಿಕಾರಿಗಳನ್ನು ಸೇರಿಸಿ ಇತರ ರಾಜ್ಯಗಳಲ್ಲಿ ಯಾವ ರೀತಿ ಒಪಿಎಸ್ ಜಾರಿ ಮಾಡಿದ್ದಾರೆ ಎಂದು ಅಧ್ಯಯನ ವರದಿ ಪಡೆದು, ಇರುವ ತಾಂತ್ರಿಕ ಸಮಸ್ಯೆ ಪರಿಹರಿಸಿ ಒಪಿಎಸ್ ಜಾರಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿಯ ಎಸ್ ವಿ ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಒಪಿಎಸ್ ಜಾರಿ ಕುರಿತು ಪರಿಶೀಲನೆ ನಡೆಸಲು ಎಸಿಎಸ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸಲಾಗಿದೆ. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ಆಗಿಲ್ಲ. ಸಮಿತಿಗೆ ವೇಗವಾಗಿ ಕೆಲಸ ಮಾಡಲು ಸೂಚಿಸಲಾಗುತ್ತದೆ. ಒಪಿಎಸ್ ಅನುಷ್ಠಾನಕ್ಕೆ ಎರಡು ಸಮಸ್ಯೆಗಳಿವೆ. ಸರ್ಕಾರದ ಮಟ್ಟದಲ್ಲಿ ಎಸಿಎಸ್ ಮೂರು ಸಭೆ ಮಾಡಿದ್ದಾರೆ. ಎನ್ಪಿಎಸ್ ಅವರ ಪ್ರಕಾರ ಪಿಎಫ್ ಫಂಡ್ಗೆ ಕಾಂಟ್ರಿಬ್ಯೂಷನ್ ಕಟ್ಟಲಾಗಿದೆ. ಅದು ಪಿಎಫ್ ಸೆಂಟ್ರಲ್ ಖಾತೆಗೆ ಹೋಗಿದೆ. ಆ ಹಣ ನಮಗೆ ವಾಪಸ್ ಬರಬೇಕಿದೆ. ಅದು ವಾಪಸ್ ಬರದೇ ಇದ್ದರೆ ಎರಡೂ ಸ್ಕೀಮ್ಗಳಲ್ಲೂ ಸಿಬ್ಬಂದಿ ಮುಂದುವರಿಯುತ್ತಾರೆ." ಎಂದರು
"ಈಗಾಗಲೇ ರಾಜಸ್ಥಾನ ಸರ್ಕಾರದವರು ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ತಮ್ಮ ಪಿಎಫ್ ಕಾಂಟ್ರಿಬ್ಯೂಷನ್ ವಾಪಸ್ ಕೊಡಿ ಎಂದು ಕೇಳಿದ್ದಾರೆ. ಆದರೆ ಕೊಟ್ಟಿಲ್ಲ. ಹಾಗಾಗಿ ನಾವು ಕೂಡ ಹಣ ಬರದೇ ಮತ್ತೊಂದು ಪಿಎಫ್ ಖಾತೆಗೆ ಹಣ ಹಾಕಿದರೆ ಸಮಸ್ಯೆಯಾಗಲಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆ ಇದೆ. ಇದನ್ನು ನಿಭಾಯಿಸಲು ಚಿಂತನೆ ನಡೆಸಲಾಗಿದೆ. ಎಸಿಎಸ್ ಒಬ್ಬರ ಸಮಿತಿಯಿಂದ ಪರಿಹಾರ ಅಸಾಧ್ಯ. ಹಾಗಾಗಿ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಒಪಿಎಸ್ ಜಾರಿ ಮಾಡಿದ್ದಾರೋ ಅಲ್ಲಿ ಅಧ್ಯಯನ ನಡೆಸಲು ಸಿಎಂ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದವರು ಕೂಡ ರಾಷ್ಟ್ರೀಯ ಪಿಂಚಣಿ ಯೋಜನೆ ಮರು ಜಾರಿ ಕುರಿತು ಸಮಿತಿ ರಚಿಸಿದ್ದು, ಪರಿಶೀಲನೆ ಮಾಡುತ್ತಿದೆ. ಹಾಗಾಗಿ ನಮಗೆ ಹಣ ವಾಪಸ್ ಮಾಡಿದರೆ ಒಪಿಎಸ್ ಜಾರಿಗೆ ಮುಂದಾಗಲಿದ್ದೇವೆ' ಎಂದು ಸದನಕ್ಕೆ ತಿಳಿಸಿದರು.