ಕರ್ನಾಟಕ

karnataka

ETV Bharat / state

ಬಾಕಿ ತೆರಿಗೆ ಸಂಗ್ರಹಿಸದಿದ್ದರೆ ಅಧಿಕಾರಿಗಳೇ ಹೊಣೆ: ಸಚಿವ ಭೈರತಿ ಸುರೇಶ್​ ಎಚ್ಚರಿಕೆ - ಪೌರಾಡಳಿತ ಸಚಿವ ರಹೀಂ ಖಾನ್

ರಾಜ್ಯದ ಬಹುಪಾಲು ನಗರ ಮತ್ತು ಪಟ್ಟಣಗಳಲ್ಲಿ ಜಾಹೀರಾತು ಫಲಕಗಳ ಮಾಲೀಕರು ಶುಲ್ಕವನ್ನೇ ತುಂಬುತ್ತಿಲ್ಲ ಎಂದು ನಗರ ಯೋಜನೆ ಸಚಿವ ಭೈರತಿ ಸುರೇಶ್​ ತಿಳಿಸಿದ್ದಾರೆ.

ಸಚಿವ ಭೈರತಿ ಸುರೇಶ್​
ಸಚಿವ ಭೈರತಿ ಸುರೇಶ್​

By ETV Bharat Karnataka Team

Published : Oct 6, 2023, 11:01 PM IST

ಸಚಿವ ಭೈರತಿ ಸುರೇಶ್​ ಎಚ್ಚರಿಕೆ

ಬೆಳಗಾವಿ: ಆಸ್ತಿ ಮತ್ತು ನೀರಿನ ಕರ ಬಹಳಷ್ಟು ಕಡೆ ಬಾಕಿ ಉಳಿದಿದೆ. ಸರ್ಕಾರದ ಆದೇಶಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹಿಸದಿದ್ದರೆ ತಪ್ಪಿತಸ್ಥ ಅಧಿಕಾರಿಗಳನ್ನೇ ಹೊಣೆ ಮಾಡಿ ಅಮಾನತು ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್​ ತಿಳಿಸಿದರು.

ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಇಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿಗದಿತ ತೆರಿಗೆ ಬರುತ್ತಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಿದೆ. ಹಾಗಾಗಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದೇನೆ ಎಂದರು.

ಪ್ರತಿವರ್ಷ ನೀಡುತ್ತಿದ್ದ ಮಳಿಗೆಗಳ ಪರವಾನಗಿಯನ್ನು ಐದು ವರ್ಷದ ಅವಧಿಗೆ ನೀಡುತ್ತಿದ್ದೇವೆ. ಐದು ವರ್ಷಗಳ ನಿಗದಿತ ಶುಲ್ಕದ ಮೊತ್ತವನ್ನು ಒಂದೇ ಬಾರಿ ತುಂಬಿಸಿಕೊಳ್ಳುತ್ತೇವೆ. ಇದರಿಂದ ವ್ಯಾಪಾರಿಗಳು ಪರವಾನಗಿ ನವೀಕರಣಕ್ಕೆ ಪ್ರತಿವರ್ಷ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಅಲ್ಲದೇ ಐದು ವರ್ಷದ ಶುಲ್ಕ ಮೊತ್ತ ಒಂದೇ ಬಾರಿ ಬರುವುದರಿಂದ ಸರ್ಕಾರಕ್ಕೂ ಆರ್ಥಿಕ ಅನುಕೂಲ ಆಗಲಿದೆ ಎಂದರು.

ರಾಜ್ಯದ ಬಹುಪಾಲು ನಗರ ಮತ್ತು ಪಟ್ಟಣಗಳಲ್ಲಿ ಜಾಹೀರಾತು ಫಲಕಗಳ ಮಾಲೀಕರು ಶುಲ್ಕವನ್ನೇ ತುಂಬುತ್ತಿಲ್ಲ ಎಂಬುದು ಗೊತ್ತಾಗಿದೆ. ಇಂತಹ ಫಲಕಗಳಿಂದ ಸರ್ಕಾರಕ್ಕೂ‌ ಬಿಡಿಗಾಸಿನ ಲಾಭವಿಲ್ಲ. ಸ್ಥಳೀಯ ಸಂಸ್ಥೆಗಳಿಗೂ ಆದಾಯ ಬರುತ್ತಿಲ್ಲ. ಯಾವುದೋ ಉದ್ಯಮಿಯ ಲಾಭಕ್ಕಾಗಿ ಪುಕ್ಕಟೆ ಪ್ರಚಾರ ನೀಡಿದಂತೆ ಆಗುತ್ತಿದೆ. ಹಾಗಾಗಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕುವಂತೆ ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಆದೇಶ ಮಾಡುತ್ತೇನೆ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಪಾರಂಪರಿಕ ಕಟ್ಟಡಗಳು ಇರುವ ಕಾರಣ ಅವು ಮುಚ್ಚುವ ಹಾಗೆ ಜಾಹೀರಾತು ಫಲಕ ಅಳವಡಿಸಬಾರದು ಎಂದು ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ ಮಂಡಿಸಲಾಗಿತ್ತು. ಅದಾಗಿಯೂ ಜಾಹೀರಾತು ಹಾಕಿದ್ದು ಗಮನಕ್ಕೆ ಬಂದಿದ್ದು, ಕೋರ್ಟ್ ಆದೇಶ ಇಲ್ಲದಿದ್ದರೆ ಚನ್ನಮ್ಮ ಸರ್ಕಲ್​ನಲ್ಲಿ ಜಾಹೀರಾತು ಫಲಕಗಳನ್ನು ಕೂಡಲೇ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭೈರತಿ ಬಸವರಾಜ ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಆರೋಪಕ್ಕೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾವ ಕೆಲಸಗಳು ನಿಂತಿಲ್ಲ. ಒಂದು ಹೊಸ ಸರ್ಕಾರ ಬಂದ ನಂತರ ದುಡ್ಡು ಹೊಂದಿಸಲು ಸಮಯ ತೆಗೆದುಕೊಳ್ಳುತ್ತದೆ. ಬೆಂಗಳೂರಿನಲ್ಲೂ ಹಾಗೇ ಆಗಿತ್ತು. ಆದರೆ, ಈಗ ಏಕಕಾಲದಲ್ಲಿ ಐದು ಸಾವಿರ ಕೋಟಿ ರೂ. ಕೆಲಸ ಶುರುವಾಗಿವೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಆರಂಭವಾಗಿವೆ. ರಾಜು ಕಾಗೆ ಅವರ ಕೆಲಸ ಆಗದೇ ಇರುವುದನ್ನು ಮಾಡಿಸುವ ಪ್ರಯತ್ನ ಮಾಡುತ್ತೇವೆ. ಯಾವುದೇ ರೀತಿ ಅಭಿವೃದ್ಧಿ ಕುಂಠಿತವಾಗಿಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವುದು ರಾಜ್ಯದ ಜನರಿಗೆ. ಇದರ ಪ್ರಯೋಜನ ಪಡೆಯುತ್ತಿರುವುದು ನಮ್ಮ ಜನರೇ ಅಲ್ಲವೇ? ಇದನ್ನು ಅಭಿವೃದ್ಧಿ ಎನ್ನುವುದಿಲ್ಲವೇ? ರಸ್ತೆ, ಶಾಲೆ, ಕಾಲೇಜು, ಆಸ್ಪತ್ರೆಗಳನ್ನೂ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಲಿಂಗಾಯತ ಶಾಸಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಲು ಸಚಿವ ಭೈರತಿ ಸುರೇಶ್​ ನಿರಾಕರಿಸಿದರು.

ಬೆಂಗಳೂರು ನಗರ ಮಾದರಿಯಲ್ಲೇ ರಾಜ್ಯದ ಇತರ ನಗರಗಳೂ ಅಭಿವೃದ್ಧಿಯತ್ತ ಸಾಗಬೇಕಿದೆ. ಅದಕ್ಕಾಗಿ ಭೂ ಪರಿವರ್ತನೆ ನಿಯಮದಲ್ಲಿ ಬದಲಾವಣೆ ಆಗಬೇಕಿದೆ. ಇದಕ್ಕಾಗಿ ಐವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ. ಇದರಲ್ಲಿ ನಾನು, ಪ್ರವಾಸೋದ್ಯಮ ಸಚಿವ ಎಚ್‌ ಕೆ ಪಾಟೀಲ, ಪೌರಾಡಳಿತ ಸಚಿವ ರಹೀಂ ಖಾನ್, ಕಂದಾಯ ಕೃಷ್ಣ ಭೈರೇಗೌಡ , ಅರಣ್ಯ ಸಚಿವ ಭೀಮಣ್ಣ ಖಂಡ್ರೆ ಈ ಉಪಸಮಿತಿಯಲ್ಲಿ ಇದ್ದೇವೆ. ಮುಂದಿನ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಚಿತ್ರದುರ್ಗದಲ್ಲಿ ಮಲೀನ ನೀರು ಕುಡಿದು ಐವರು ಜೀವ ಕಳೆದುಕೊಂಡರು. ರಾಜ್ಯದಲ್ಲಿ ಇಂಥ ಘಟನೆ ಮತ್ತೆ ರಾಜ್ಯದಲ್ಲಿ ಎಲ್ಲೂ ಮರಳಬಾರದು. ಅದಕ್ಕಾಗಿ ಎಲ್ಲಿಯೂ ಮಲಿನ ನೀರು ಸರಬರಾಜು ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಬೇಸಿಗೆಯಲ್ಲಿ ಇಂಥ ಪ್ರಕರಣ ಹೆಚ್ಚುವ ಸಾಧ್ಯತೆ ಇರುವ ಕಾರಣ ಹೆಚ್ಚು ಕಾಳಜಿ ವಹಿಸುವುದು ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಆರಂಭ: ಸಚಿವ ಭೈರತಿ ಸುರೇಶ್

ABOUT THE AUTHOR

...view details