ಬೆಳಗಾವಿ: ರಾಜ್ಯದಲ್ಲಿ ಮುಂಗಾರು ವಿಳಂಬವಾಗಿದ್ದು, ಬಿತ್ತನೆ ಕೂಡ ತಡವಾಗುತ್ತಿದೆ. ಆದ್ದರಿಂದ ಮಳೆಯಾದ ಕೂಡಲೇ ಎಲ್ಲೆಡೆ ಏಕಕಾಲಕ್ಕೆ ಬಿತ್ತನೆ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಬೀಜ-ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಳಪೆ ಬೀಜ ವಿತರಣೆ ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.
ಮುಂಗಾರು ಸಿದ್ಧತೆ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ವಿಭಾಗಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬಿತ್ತನೆ ಬೀಜ ಮತ್ತು ಗೊಬ್ಬರದ ಬೇಡಿಕೆ, ಪೂರೈಕೆ ಹಾಗೂ ವಿತರಣೆ ಮೇಲೆ ನಿಗಾ ವಹಿಸಬೇಕು. ಮಳೆ ವಿಳಂಬವಾಗಿರುವುದರಿಂದ ರೈತರು ಕೂಡ ಆತಂಕದಲ್ಲಿರುತ್ತಾರೆ. ಆದ್ದರಿಂದ ಬೀಜ-ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬರದಂತೆ ಎಚ್ಚರ ವಹಿಸಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಾಕಷ್ಟು ದಾಸ್ತಾನು ಇರುವುದರಿಂದ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಬಾರದು. ಎಲ್ಲ ಅಧಿಕಾರಿಗಳು ಸಮನ್ವಯತೆ ಹಾಗೂ ಶಿಸ್ತಿನಿಂದ ಕೆಲಸ ಮಾಡಬೇಕು. ಸಮಸ್ಯೆ ಉಂಟಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕ್ಯೂಆರ್ ಕೋಡ್ ಮೂಲಕ ಬೀಜ ವಿತರಣೆ ಮಾಡಲಾಗುತ್ತಿದ್ದು, ಕೆಲವೊಮ್ಮೆ ತಾಂತ್ರಿಕ ತೊಂದರೆ ಉಂಟಾದಾಗ ಪರ್ಯಾಯ ವ್ಯವಸ್ಥೆ ಕೂಡ ಮಾಡಿಕೊಳ್ಳಬೇಕು ಎಂದರು.
ಕಳಪೆ ಬೀಜ ವಿತರಣೆಯಾಗುತ್ತಿರುವ ಬಗ್ಗೆ ಕೆಲ ಜಿಲ್ಲೆಗಳಿಂದ ದೂರುಗಳು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಇಂತಹ ಘಟನೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಪ್ರಮಾಣೀಕರಣ ಇಲ್ಲದೇ ಬೀಜ ಮಾರಾಟವನ್ನು ವಿಚಕ್ಷಣಾ ತಂಡಗಳು ಪತ್ತೆ ಮಾಡಬೇಕು. ಈ ರೀತಿಯ ಅಕ್ರಮ ಕಂಡುಬಂದರೆ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಬೀಜ-ಗೊಬ್ಬರ ಮಾರಾಟ ಮಳಿಗೆಗಳನ್ನು ಸ್ವತಃ ಪರಿಶೀಲಿಸಿ ದಾಸ್ತಾನು ಲಭ್ಯತೆ ಹಾಗೂ ಸಮರ್ಪಕವಾಗಿ ವಿತರಣೆಗೆ ಕ್ರಮ ವಹಿಸಬೇಕು. ಇತ್ತೀಚೆಗೆ ಮಳೆಯಿಂದ ಉಂಟಾಗಿರುವ ಬೆಳೆಹಾನಿ ಕುರಿತು ಕೂಡಲೇ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ಪೋರ್ಟಲ್ ನಲ್ಲಿ ದತ್ತಾಂಶ ದಾಖಲಿಸಬೇಕು ಎಂದು ತಿಳಿಸಿದರು. ರೈತರ ದೂರುಗಳ ಸ್ವೀಕಾರ ಹಾಗೂ ಪರಿಹಾರ ಕ್ರಮಗಳನ್ನು ತ್ವರಿತಗೊಳಿಸಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು. ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.