ಬೆಳಗಾವಿ: ಹಾಸನ ಡಿಸಿಸಿ ಬ್ಯಾಂಕ್ನಲ್ಲಿನ ಅವ್ಯವಹಾರ ಆರೋಪ ಕುರಿತ ತನಿಖೆ ನಡೆಸಲು ಅಧಿಕಾರಿಗಳು ಭಯಭೀತರಾಗಿದ್ದಾರೆ. ಹಾಗಾಗಿ ವಿಶೇಷವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮೋಹನ್ ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೀಡುತ್ತಿರುವ ಸಾಲಗಳ ಕುರಿತು ಹಾಗೂ ಡಿಸಿಸಿ ಬ್ಯಾಂಕ್ ಅವ್ಯವಹಾರ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಸದಸ್ಯತ್ವ ಕೊಡಲು ಕೆಲ ಡಿಸಿಸಿ ಬ್ಯಾಂಕ್ನವರು ಅಡ್ಡಿಪಡಿಸುತ್ತಿದ್ದಾರೆ. ತಿಂಗಳ ಒಳಗೆ ಕೊಡದೇ ಇದ್ದಲ್ಲಿ ಡಿಸಿಸಿ ಬ್ಯಾಂಕ್ ಎಂಡಿಯನ್ನು ಅಮಾನತು ಮಾಡಲಾಗುತ್ತದೆ ಎಂದು ಹೇಳಿದರು.
ಹಾಸನಕ್ಕೆ ಹೋಗಲು ಅಧಿಕಾರಿಗಳಿಗೆ ಭಯ: ಡಿಸಿಸಿ ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಹಾಸನ ಎಂದರೆ ಎಲ್ಲ ಅಧಿಕಾರಿಗಳು ಭಯಪಡುತ್ತಾರೆ. ಹಾಸನ ಡಿಸಿಸಿ ಬ್ಯಾಂಕ್ ವಿಚಾರಣೆಗೆ ಹೋಗಲು ಹೆದರುತ್ತಿದ್ದಾರೆ. ಯಾಕೆ ಎಂದು ನಾನು ಹೇಳುವುದಿಲ್ಲ. ಈ ವೇಳೆ ಸರ್ಕಾರವೇ ಹೆದರುತ್ತಿದೆಯೇ? ಎಂದು ಪ್ರತಿಪಕ್ಷ ಸದಸ್ಯರು ತಿವಿದರು.
ಓರ್ವ ಅಧಿಕಾರಿ ನೇಮಕ: ಇದಕ್ಕೆ ತಿರುಗೇಟು ನೀಡಿದ ಸಚಿವರು, ಸರ್ಕಾರ ಹೆದರುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಭಯಭೀತರಾಗುತ್ತಿದ್ದಾರೆ. ರಕ್ಷಣೆ ಕೊಡುತ್ತೇವೆ ಎಂದರೂ ಹೋಗಲು ಒಪ್ಪುತ್ತಿಲ್ಲ. ಹೀಗಾಗಿ ಒಬ್ಬ ಅಧಿಕಾರಿ ನೇಮಿಸುತ್ತಿದ್ದೇವೆ. ಮೂರು ತಿಂಗಳಿನಲ್ಲಿ ವರದಿ ಕೊಡುವಂತೆ ಸೂಚಿಸಿದ್ದೇವೆ. ಸಹಕಾರ ಇಲಾಖೆ ಈಗಾಗಲೇ ಈ ಸಂಬಂಧ ಆದೇಶವನ್ನ ಮಾಡಿದೆ ಎಂದರು. ಇದಕ್ಕೆ ಪ್ರಶ್ನೆ ಕೇಳಿದ್ದ ಮೋಹನ್ ಕೊಂಡಜ್ಜಿ ಇಲ್ಲಿ ಇಂತಹ ಸಮಸ್ಯೆ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.