ಬೈಲಹೊಂಗಲ(ಬೆಳಗಾವಿ): ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕಾದ ಅಧಿಕಾರಿಗಳು ತಾಲೂಕಿನ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆ ತೆರೆಯದೆ ಇರುವುದರಿಂದ ಬೆಳೆಗಳು ಕೊಳೆಯುವಂತಾಗಿದೆ.
ವಿನಾಯಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮೂರನೇ ಬಾರಿಗೆ ಘೋಷಿಸಲಾದ ಲಾಕ್ಡೌನ್ನಲ್ಲಿ ಕೆಲ ವಲಯಗಳಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ, ಬೈಲಹೊಂಗಲದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ತಾಲೂಕಿನ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯನ್ನು ತೆರೆಯದ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ.
ಪಟ್ಟಣದ ಪುರಸಭೆ ಎದುರಿಗಿರುವ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಗಣೇಶ ದೇವಸ್ಥಾನದ ಬಳಿಯ ಮುಖ್ಯ ಮಾರುಕಟ್ಟೆಗೆ ಸ್ಥಳಾಂತರಿಸಲಾತ್ತು. ಆದರೆ ರೈತರು ಬೆಳೆದ ಬೆಳೆಗಳನ್ನು ಆಯಾ ತಾಲೂಕಿನಲ್ಲಿಯೇ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವೇ ಜಿಲ್ಲಾಡಳಿತದ ಮೂಲಕ ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶಕ್ಕೆ ಕಿವಿಗೊಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇನ್ನು ಸ್ಥಳೀಯ ಶಾಸಕರು ತಾಲೂಕಿನ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಕೂಡಲೇ ರೈತರ ಬೆಳೆಗಳಿಗೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸೂಕ್ತ ಬೆಲೆ ಕಲ್ಪಿಸಬೇಕು. ಸಮೀಕ್ಷೆ ನಡೆಸಿ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಮುಂಗಾರು ಬೆಳೆಗೆ ಸಿದ್ಧವಾಗುತ್ತಿರುವ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರಗಳನ್ನು ಒದಗುವಂತೆ ಎಚ್ಚರಿಕೆ ವಹಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.