ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಅಣಕು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ ಘಟನೆ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಕೆಲ ಕಿಡಿಗೇಡಿಗಳು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ ರೀತಿಯಲ್ಲಿ ನೇತು ಹಾಕಿದ್ದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನೂಪುರ್ ಶರ್ಮಾ ಅವರ ಭಾವಚಿತ್ರದ ಸಮೇತ ಅವರ ಪ್ರತಿಕೃತಿ ನಗರದ ಫೋರ್ಟ್ ರಸ್ತೆಯಲ್ಲಿ ಹಗ್ಗ ಕಟ್ಟಿ ಗುರುವಾರ ತಡರಾತ್ರಿ ನೇತುಹಾಕಿದ್ದರು. ಶುಕ್ರವಾರ ಬೆಳಗ್ಗೆ ಇದನ್ನು ಕಂಡು ಹಿಂದೂ ಜಾಗರಣ, ಶ್ರೀರಾಮ ಸೇನೆ, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.