ಬೆಳಗಾವಿ:ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ನೇತು ಹಾಕಿದ ಪ್ರಕರಣ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಮಾರ್ಕೆಟ್ ಠಾಣೆ ಪಿಎಸ್ಐ ವಿಠ್ಠಲ್ ಹಾವಣ್ಣವರ್ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ನೂಪುರ್ ಶರ್ಮಾ ಪ್ರತಿಕೃತಿ ನೇತುಹಾಕಿದ್ದ ಕಿಡಿಗೇಡಿಗಳು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ:ನೂಪುರ್ ಶರ್ಮಾ ಅಣಕು ಪ್ರತಿಕೃತಿ ಗಲ್ಲಿಗೆ: ಬೆಳಗಾವಿಯಲ್ಲಿ ಬಿಗುವಿನ ವಾತಾವರಣ!
IPC ಸೆಕ್ಷನ್ 1860(u/s-153, 109), ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್ಮೆಂಟ್ ಆ್ಯಕ್ಟ್(open places disfigurement act) 1951 & 1981 (U/s-3,4)ನಡಿ ಕೇಸ್ ದಾಖಲಿಸಲಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಫೋರ್ಟ್ ರಸ್ತೆಯ ದೇಶಪಾಂಡೆ ಪೆಟ್ರೋಲ್ ಬಂಕ್ ಬಳಿ ಪ್ರತಿಕೃತಿ ನೇತು ಹಾಕಿದ್ದ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ನೂಪುರ್ ಶರ್ಮಾ ಭಾವಚಿತ್ರ ಇರುವ ಪ್ರತಿಕೃತಿಗೆ ಸೀರೆ ಉಡಿಸಿ ತೂಗು ಹಾಕಲಾಗಿತ್ತು. ದುರುದ್ದೇಶದಿಂದ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿ ಪ್ರತಿಕೃತಿಯನ್ನು ನೇತುಹಾಕಲಾಗಿತ್ತು. ಇದಲ್ಲದೇ ನಗರದಲ್ಲಿ ದೊಂಬಿ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಂಚನ್ನು ಕೂಡ ಕಿಡಿಗೇಡಿಗಳು ಮಾಡಿದ್ದರು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರವಾದಿ ಮುಹಮ್ಮದ್‌ರ ಬಗ್ಗೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಿಡಿಗೇಡಿಗಳು ಪ್ರತಿಕೃತಿ ನೇತು ಹಾಕಿದ್ದರು.