ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭೆ ಉಪಚುನಾವಣೆ ; ಬಿಜೆಪಿ ಟಿಕೆಟ್‍ಗೆ ಅಮೆರಿಕಾದಿಂದಲೂ ಅರ್ಜಿ! - belgavi upcoming loksabha election

ಗೃಹಸಚಿವ ಅಮಿತ್ ಶಾ ಇದೇ 17ರಂದು ಬೆಳಗಾವಿಗೆ ಭೇಟಿ ನೀಡಲಿದ್ದು, ಟಿಕೆಟ್ ಆಕಾಂಕ್ಷಿಗಳ ಚಿತ್ತ ಶಾ ಆಗಮನದತ್ತ ನೆಟ್ಟಿದೆ. ಜ. 18ರ ನಂತರ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದ್ದು, ಅಮಿತ್​ ಶಾ ಮುಂದೆ ಆಕಾಂಕ್ಷಿಗಳ ಪರೇಡ್ ನಡೆಯುವ ಸಾಧ್ಯತೆಯೂ ಇದೆ..

NRI seeks  bjp ticket for belgagavi loksabha by poll
ಸೂರ್ಯಕಾಂತ ಸಂತ್ರಿ

By

Published : Jan 9, 2021, 3:01 PM IST

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ವಿಶೇಷ ಅಂದ್ರೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಂದಲೂ ಬಿಜೆಪಿ ಟಿಕೆಟ್‍ಗೆ ಬೇಡಿಕೆ ಇಡಲಾಗಿದೆ. ಪ್ರಸ್ತುತ ಅಮೆರಿಕಾದ ವಾಷಿಂಗ್​ಟನ್​ನಲ್ಲಿ ನೆಲೆಸಿರುವ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಸೂರ್ಯಕಾಂತ ಸಂತ್ರಿ ಅವರು, ಎನ್‍ಆರ್​​ಐ (ನಾನ್ ರೆಸಿಡೆಂಟ್ ಇಂಡಿಯನ್) ಕೋಟಾದಡಿ ಬಿಜೆಪಿ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಅಮೆರಿಕಾದಿಂದಲೇ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರಿಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯ ದೆಹಲಿ ಕಚೇರಿಯಿಂದಲೂ ಸೂರ್ಯಕಾಂತ ಅವರನ್ನು ಫೋನ್ ಮೂಲಕ ಸಂಪರ್ಕಿಸಲಾಗಿದ್ದು, ಮಾಹಿತಿ ಕಲೆ ಹಾಕಲಾಗಿದೆ.

ಬಿಟೆಕ್ ಪದವಿ ಹೊಂದಿರುವ 62 ವರ್ಷದ ಸೂರ್ಯಕಾಂತ ಹಾಂಕಾಂಗ್‍ನಲ್ಲಿ ಜಪನಿಸ್ ಶಿಪ್ಪಿಂಗ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ಸದ್ಯ ಅವರೀಗ ಅಮೆರಿಕಾದಲ್ಲಿ ಉದ್ಯಮ ಆರಂಭಿಸಿದ್ದಾರೆ.

ವಾಟ್ಸ್‌ಆ್ಯಪ್​ ಕಾಲ್ ಮೂಲಕ ಈಟಿವಿ ಭಾರತ ಜೊತೆಗೆ ಮಾತನಾಡಿದ ಸೂರ್ಯಕಾಂತ ಸಂತ್ರಿ , ಅಮೆರಿಕಾದಲ್ಲಿರುವ ನಮ್ಮ ಸ್ನೇಹಿತರ ಸಲಹೆ ಮೇರೆಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದು, ನಮ್ಮ ಜನರ ಸೇವೆ ಮಾಡುವ ಇಚ್ಛೆ ಹೊಂದಿದ್ದೇನೆ. NRI ಕೋಟಾದಡಿ ಟಿಕೆಟ್ ಕೇಳಿದ್ದೇನೆ. ನಮ್ಮ ಹಿರಿಯರ ಜಮೀನನ್ನು ಗ್ರಾಮದ ಶಿಕ್ಷಣ ಸಂಸ್ಥೆಗೆ ದಾನ ನೀಡಿದ್ದೇವೆ.

ಆ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಅನೇಕ ರೈತರಿಗೆ ನಾವು ನೆರವು ನೀಡಿದ್ದೇವೆ. ಬಿಜೆಪಿ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದು, ಬಿಜೆಪಿ ನಾಯಕರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಟಿಕೆಟ್ ಸಿಕ್ರೆ ಚುನಾವಣೆ ಎದುರಿಸುತ್ತೇನೆ, ಗೆದ್ದರೆ ನಮ್ಮ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ರು.

ಘಟಾನುಘಟಿಗಳಿಂದ ಟಿಕೆಟ್‍ಗೆ ಪಟ್ಟು :ಜಿಲ್ಲೆಯ ಘಟಾನುಘಟಿ ನಾಯಕರು ಬಿಜೆಪಿ ಟಿಕೆಟ್‍ಗೆ ಬೇಡಿಕೆ ಇಟ್ಟಿದ್ದಾರೆ. ಸುರೇಶ ಅಂಗಡಿ ದ್ವಿತೀಯ ಸುಪುತ್ರಿ ಶೃದ್ಧ ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಸುರೇಶ ಅಂಗಡಿ ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವಂತೆಯೂ ಬಿಜೆಪಿ ನಾಯಕರು ಹೈಕಮಾಂಡ್​ಗೆ ಒತ್ತಾಯಿಸುತ್ತಿದ್ದಾರೆ.

ಇನ್ನು, ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಉದ್ಯಮಿ ಜಗದೀಶ ಮೆಟಗುಡ್ಡ, ಅಮಿತ್ ಕೋರೆ, ಸಚಿವ ರಮೇಶ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ, ಡಾ. ರವಿ ಪಾಟೀಲ, ರುದ್ರಣ್ಣ ಚಂದರಗಿ, ಮಹಾಂತೇಶ ಒಕ್ಕುಂದ, ಉಜ್ವಲಾ, ಡಾ.ಸೋನಾಲಿ ಸರನೋಬಾತ್, ದೀಪಾ ಕುಡಚಿ ಸೇರಿ ಹೀಗೆ ಹಲವರು ಬೇಡಿಕೆ ಇಟ್ಟಿದ್ದಾರೆ.

ಅಮಿತ್ ಶಾ ಬೆಳಗಾವಿಗೆ :ಗೃಹಸಚಿವ ಅಮಿತ್ ಶಾ ಇದೇ 17ರಂದು ಬೆಳಗಾವಿಗೆ ಭೇಟಿ ನೀಡಲಿದ್ದು, ಟಿಕೆಟ್ ಆಕಾಂಕ್ಷಿಗಳ ಚಿತ್ತ ಶಾ ಆಗಮನದತ್ತ ನೆಟ್ಟಿದೆ. ಜ. 18ರ ನಂತರ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದ್ದು, ಅಮಿತ್​ ಶಾ ಮುಂದೆ ಆಕಾಂಕ್ಷಿಗಳ ಪರೇಡ್ ನಡೆಯುವ ಸಾಧ್ಯತೆಯೂ ಇದೆ. ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ಇದನ್ನೂ ಓದಿ :ವಿಧಾನಪರಿಷತ್ ಗಲಾಟೆ ಪ್ರಕರಣ ತನಿಖೆಗೆ ಏಕಪಕ್ಷೀಯವಾಗಿ ಸದನ ಸಮಿತಿ ರಚನೆ ; ಎನ್. ರವಿಕುಮಾರ್

ABOUT THE AUTHOR

...view details