ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಕೊಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನ ಸಚಿವ ಮಾಡಿಲ್ಲ. ಅದಕ್ಕಾಗಿ ಹೀಗೆ ಮಾತಾಡ್ತಿದ್ದಾರೆ. ಯಾರೇ ಆದ್ರು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಪಕ್ಷದ ಹಿರಿಯ ನಾಯಕರನ್ನ ಗೌರವಿಸಬೇಕು. ಯತ್ನಾಳ್ ಅವರ ಇಂತಹ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಬಿಜೆಪಿ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನ್ ಮಾಡಿದ್ದೇವೆ. ಈ ಬಗ್ಗೆ ಪಕ್ಷ ಸೂಕ್ತವಾದ ನಿರ್ಧಾರ ಕೈಗೊಳ್ಳಲಿದೆ. ಯಾರು ತಮ್ಮ ಸ್ವಾರ್ಥವನ್ನ ಇಟ್ಟುಕೊಂಡು ಮಾತನಾಡಬಾರದು ಎಂದರು.
ಬಿಎಸ್‌ವೈ ಜೊತೆ ಬೊಮ್ಮಾಯಿ ಒಟ್ಟಾಗಿ ವಿಜಯಸಂಕಲ್ಪ ಯಾತ್ರೆ ಮಾಡಿದ್ರೆ ಬಿಜೆಪಿ ಸೋಲುತ್ತದೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರ ಹೇಳಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಯತ್ನಾಳ್ ಅವರ ಹೇಳಿಕೆಯನ್ನ ಪಕ್ಷದ ಕಾರ್ಯಕರ್ತರು ನಿರ್ಲಕ್ಷ್ಯ ಮಾಡುತ್ತಾರೆ. ಅವರು ನಮ್ಮ ಕೋರ್ ಕಮಿಟಿ ಸದಸ್ಯರೂ ಅಲ್ಲ. ಇಂತಹ ಹೇಳಿಕೆ ಪಕ್ಷದ ಕಾರ್ಯಕರ್ತರಿಗೂ ಇಷ್ಟ ಆಗಲ್ಲ. ಯತ್ನಾಳ್ ಅವರು ಬಿಜೆಪಿಯಿಂದ ಗೆದ್ದಿದ್ದಾರೆ. ಈ ಹಿಂದೆ ಪಕ್ಷದಿಂದ ಹೊರಗೆ ಹೋಗಿದ್ರು. ಬಿಜೆಪಿ ಎಲ್ಲಾ ಸಮಾಜ, ಜನಾಂಗದ ಪರವಾಗಿ ಕೆಲಸ ಮಾಡುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ವರ್ಚಸ್ಸಿದೆ, ಶೀಘ್ರದಲ್ಲೇ ಅವರಿಗೆ ದೊಡ್ಡ ಜವಾಬ್ದಾರಿ: ಅರುಣ್ ಸಿಂಗ್
ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಸ್ಸಿ ಎಸ್ಟಿ ಮೀಸಲಾತಿಯನ್ನ ಸಿಎಂ ಬೊಮ್ಮಾಯಿ ಸರ್ಕಾರ ಹೆಚ್ಚಳ ಮಾಡಿದೆ. ಎಸ್ಸಿ ಎಸ್ಟಿ ಮೀಸಲಾತಿಯನ್ನ ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್ ಎಂದಿಗೂ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿಲ್ಲ. ಪಂಚಮಸಾಲಿ ಸಮುದಾಯದ ಮೂರು ದೊಡ್ಡ ನಾಯಕರೇ ಮಂತ್ರಿಗಳಿದ್ದಾರೆ. ಮುರಗೇಶ್ ನಿರಾಣಿ, ಸಿಸಿ ಪಾಟೀಲ್, ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ ಅವರು ಪಂಚಮಸಾಲಿ ಸಮುದಾಯದ ಸಚಿವರು. ಈ ಬಗ್ಗೆ ಕುಳಿತು ಸಮಾಲೋಚನೆ ಮಾಡ್ತಿವಿ ಎಂದು ಅರುಣ್ ಸಿಂಗ್ ಹೇಳಿದರು.
ಬಿಜೆಪಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಭಿನ್ನಾಭಿಪ್ರಾಯ ಇದೆ: ಬಿಜೆಪಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಬಿಜೆಪಿ ಎಲ್ಲ ನಾಯಕರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಗುಂಪುಗಾರಿಗೆ ಏನೇ ಇದ್ದರೂ ಕಾಂಗ್ರೆಸ್ನಲ್ಲಿದೆ. ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳಿವೆ. ರಾಹುಲ್ ಗಾಂಧಿ ಇಬ್ಬರೂ ನಾಯಕರ ಕೈ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರು, ಇಬ್ಬರೂ ನಾಯಕರು ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ. ಜಗಳ, ಕಿತ್ತಾಟ ಕಾಂಗ್ರೆಸ್ನಲ್ಲಿದೆ. ಕಾಂಗ್ರೆಸ್ನಲ್ಲಿ ಎರಡು ಬಣಗಳಿವೆ. ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಂದಾಗಿ ಮೋದಿ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಬಣ ರಾಜಕಾರಣ ಇಲ್ಲ. ಬೆಳಗಾವಿಯಲ್ಲಿ ಬಿಜೆಪಿಯಲ್ಲಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿವೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಲೇಬೇಕು. ಮನೆಯಲ್ಲೂ ಭಿನ್ನಾಭಿಪ್ರಾಯ ಇರುತ್ತವೆ. ಮನಸ್ಸಿನಿಂದ ಎಲ್ಲರೂ ಒಂದಾಗಿಯೇ ಇದ್ದಾರೆ. ಪ್ರಜಾಪ್ರಭುತ್ವದಲ್ಲಿ ಭಿನ್ನವಾದ ಅಭಿಪ್ರಾಯ ಇರಲೇಬೇಕು. ಮನಸ್ಸಿನಿಂದ ಯಾವುದೇ ಭೇದ ಭಾವ ಇಲ್ಲ ಎಂದರು.
ಇದನ್ನೂ ಓದಿ:150 ಸ್ಥಾನ ಗೆಲ್ಲಲು ರೋಡ್ ಮ್ಯಾಪ್: ಅರುಣ್ ಸಿಂಗ್
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪರನ್ನ ನಿರ್ಲಕ್ಷ್ಯ ಮಾಡುತ್ತಿಲ್ಲ: ಯಡಿಯೂರಪ್ಪ ಅವರನ್ನ ನಿರ್ಲಕ್ಷ್ಯ ಮಾಡುತ್ತಿಲ್ಲ. ಅವರು ವಿಜಯ ಸಂಕಲ್ಪ ಯಾತ್ರೆಗೆ ಹೋಗುತ್ತಿದ್ದಾರೆ. ಬಿಎಸ್ ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅನೇಕ ಬಾರಿ ವಿರೋಧ ಪಕ್ಷದ ನಾಯಕರು ಆಗಿದ್ದರು. ಯಡಿಯೂರಪ್ಪ ಅವರು ಕರ್ನಾಟಕದ ಬಹಳ ದೊಡ್ಡ ಮತ್ತು ಜನಪ್ರಿಯ ನಾಯಕರಾಗಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ 150 ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ. ಅವರು ಜನರ ಬಳಿ ಹೋಗುತ್ತಿರುವುದು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವೂ ಲಾಗ ಹೊಡಿಯುತ್ತೀರಿ: ಯತ್ನಾಳ್
ಗೋವಾ, ಉತ್ತರಾಖಂಡ, ಮಣಿಪುರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಹಿಮಾಚಲ ಮತ್ತು ಗುಜರಾತಿನಲ್ಲೂ ಬಿಜೆಪಿ ಸರ್ಕಾರ ರಚನೆ ಮಾಡ್ತಿವಿ. ಕಾಂಗ್ರೆಸ್ ಸೋಲುವ ಸ್ಥಿತಿಯಲ್ಲಿ ಇದೇ. ಕರ್ನಾಟಕದಲ್ಲಿ ಮೊದಲಿಗಿಂತ ಅಧಿಕ ಸ್ಥಾನ ಗೆದ್ದು ಸರ್ಕಾರ ಮಾಡುತ್ತೇವೆ. ಬಿಜೆಪಿ ಸರ್ಕಾರ ಬಡವರು, ರೈತರು, ಮಹಿಳೆಯರ ಪರ ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿ ಮೋದಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಬಿಜೆಪಿ ಗೆಲುವಿನ ಹಾದಿಯಲ್ಲಿ ಇದ್ದರೆ ಕಾಂಗ್ರೆಸ್ ಸೋಲಿನ ಹಾದಿಯಲ್ಲಿ ಇದೆ ಎಂದು ಅರುಣ ಸಿಂಗ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರಿದ್ದಾರೆ. ಜನ ಪರ ಕಾಳಜಿ ಉಳ್ಳವರು ಆಗಿದ್ದಾರೆ. ಹೀಗಾಗಿ, ಅವರೊಂದಿಗೆ ಚರ್ಚೆ ಆಗಿದೆ. ಸಾಮಾನ್ಯವಾಗಿ ಎಲ್ಲರೊಂದಿಗೆ ನಮ್ಮ ಚರ್ಚೆ ಆಗುತ್ತದೆ. ಸಚಿವ ಕಾರಜೋಳ ಅವರು ಪಕ್ಷಕ್ಕೆ ಮಾರ್ಗದರ್ಶನ ಮಾಡ್ತಾರೆ. ಅವರೊಂದಿಗೂ ಚರ್ಚೆ ಆಗ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಪ್ರಮುಖವಾಗಿದ ಎಂದರು.