ಬೆಳಗಾವಿ:''ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಕಾರ್ಖಾನೆಗಳ ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗಿದೆ'' ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.
ಸುವರ್ಣಸೌಧಲ್ಲಿ ಮಂಗಳವಾರ ಸಚಿವ ಶಿವಾನಂದ ಪಾಟೀಲ್, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪ್ರಸಕ್ತ ಹಂಗಾಮಿನಲ್ಲಿ 78 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಇದರಲ್ಲಿ 24 ಮಾತ್ರ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿದ್ದು, ಉಳಿದ 54 ಕಾರ್ಖಾನೆಗಳು ಮುಂದಿನ ಹದಿನೈದು ದಿನಗಳಲ್ಲಿ ಡಿಜಿಟಲ್‌ಗೆ ಪರಿವರ್ತನೆ ಆಗಬೇಕು'' ಎಂದು ತಿಳಿಸಿದರು.
''ರೈತರು, ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು. ರೈತರ ಗದ್ದೆಗಳಿಂದ ಲಾರಿಯಲ್ಲಿ ಎಷ್ಟು ಕಬ್ಬು ಬಂದಿರುತ್ತದೆಯೋ ಅಷ್ಟೇ ತೂಕ ಕಾರ್ಖಾನೆಗಳಲ್ಲಿ ತೂಕ ಮಾಡಿದಾಗಲೂ ಬರಬೇಕು. ಸರಿಯಾಗಿ ತೂಕ ಮಾಡದಿದ್ದರೆ, ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ'' ಎಂದು ಎಚ್ಚರಿಸಿದರು.
''ಡಿಜಿಟಲ್ ತೂಕ ಯಂತ್ರಗಳ ಅಳವಡಿಕೆಗೆ ಸಂಬಂಧಿಸಿದಂತೆ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಮಾಪನಶಾಸ್ತ್ರ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರು, ನಿಯಂತ್ರಕರು ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು. ''ಪ್ರಸ್ತುತ 5 ಕೆಜಿ ಅಕ್ಕಿ ಬದಲಿಗೆ ಗ್ರಾಹಕರಿಗೆ ನಗದು ನೀಡಲಾಗುತ್ತಿದೆ. ಹಲವು ಪ್ರಯತ್ನಗಳ ನಂತರವೂ ಅಕ್ಕಿ ದೊರೆಯದ ಕಾರಣ ಹಣ ನೀಡಲಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ, ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು'' ಎಂದರು.
ಕಬ್ಬು ಕಟಾವು ಕಾರ್ಮಿಕರ ಸಮಸ್ಯೆಗಳ ಚರ್ಚೆ ಮಾಡಲು ಆಗ್ರಹ:ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯನ್ನು ಬೆಳೆಯಲಾಗುತ್ತಿದೆ. ಆದ್ರೆ, ಕಬ್ಬು ಕಟಾವು ಮಾಡಿ ಸಾಗಿಸುವ ಕಾರ್ಮಿಕರಿಗೆ ನ್ಯಾಯಯುತ ಸಂಬಳ ಸಿಗದೇ ಇರುವುದರಿಂದ ಸಾವಿರಾರು ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಈ ಸಂಕಷ್ಟಗಳ ಕುರಿತಾಗಿ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಚಿಕ್ಕೋಡಿ ಭಾಗದ ಕಬ್ಬು ಕಟಾವು ಕಾರ್ಮಿಕರು ಆಗ್ರಹಿಸಿದ್ದರು. ''3 ವರ್ಷಗಳಿಂದ ಕಾರ್ಮಿಕರಿಗೆ ಪ್ರತಿ ಟನ್ ಕಬ್ಬು ಕಟಾವಿಗೆ 324 ರೂಪಾಯಿ ಕೊಡಲಾಗುತ್ತಿದೆ. ಈ ಕೂಲಿ ದರವನ್ನು ಸಕ್ಕರೆ ಕಾರ್ಖಾನೆಗಳು ಏರಿಕೆ ಮಾಡಬೇಕು. ಈ ಬಗ್ಗೆ ಸಕ್ಕರೆ ಕಾರ್ಖಾನೆಗಳೊಂದಿಗೆ ಸರ್ಕಾರ ಚರ್ಚಿಸಿ ಕಾರ್ಮಿಕರ ಹಿತ ಕಾಪಾಡಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಡಿ.21ರಿಂದ ನೋಂದಣಿ ಪ್ರಕ್ರಿಯೆ ಆರಂಭ: ಷರತ್ತುಗಳು ಅನ್ವಯ