ಬೆಳಗಾವಿ :ಪ್ರಭಾವಿ ರಾಜಕೀಯ ನಾಯಕ ಮತ್ತು ಕಾರ್ಯಕರ್ತನ ನಡುವಿನ ಹೋರಾಟ ಎಂದೇ ಬಿಂಬಿತವಾಗಿರುವ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಹಾಲಿ ಸದಸ್ಯ ಹನುಮಂತ ನಿರಾಣಿ ಎದುರು ಕಾಂಗ್ರೆಸ್ ಕಾರ್ಯಕರ್ತ ಸುನೀಲ ಸಂಕ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಹೊಂದಿರುವ ಬೆಳಗಾವಿ ಜಿಲ್ಲೆಯ ಹೊಂದಾಣಿಕೆ ರಾಜಕಾರಣ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹಿಮ್ಮೇಳದಲ್ಲಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುವ ಗುಸುಗುಸು.
ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸದಸ್ಯ ಹನಮಂತ ನಿರಾಣಿ ಕಣದಲ್ಲಿದ್ದರೆ, ರಾಜಕೀಯ ಹಿನ್ನಲೆಯಿಲ್ಲದ ಕಾರ್ಯಕರ್ತ ಸುನೀಲ್ ಸಂಕ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಭಾಗದಲ್ಲಿ ಸಂಘಟನೆ ಇಲ್ಲದ ಕಾರಣಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಸೇರಿ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಕೊನೆಯ ಕಸರತ್ತಿನಲ್ಲಿ ತೊಡಗಿದ್ದಾರೆ.
ಅಭ್ಯರ್ಥಿಗಳು ಮತ್ತು ಅವರ ಹಿನ್ನೆಲೆ : ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದವು. ಹನುಮಂತ ನಿರಾಣಿ ಎರಡನೇ ಬಾರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ವೀರಕುಮಾರ್ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಯುವ ಮುಖಂಡ ಕಿರಣ್ ಸಾಧುನವರ ಕಾಂಗ್ರೆಸ್ ಟಿಕೆಟ್‍ಗೆ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಮಾತ್ರ ಕಾರ್ಯಕರ್ತ ಸುನೀಲ ಸಂಕಗೆ ಟಿಕೆಟ್ ಘೋಷಣೆ ಮಾಡಿದ್ದು, ಕಾಂಗ್ರೆಸ್ ವಲಯದಲ್ಲೇ ಅಚ್ಚರಿಗೆ ಕಾರಣವಾಗಿದೆ.
ಸಂಕ ಕುಟುಂಬ ಮೂರು ತಲೆಮಾರುಗಳಿಂದ ಕಾಂಗ್ರೆಸ್ ಜೊತೆಗಿದೆ. ನ್ಯಾಯವಾದಿಯೂ ಆಗಿರುವ ಸುನೀಲ ಸಂಕ ಕಳೆದ ಎರಡು ವರ್ಷಗಳಿಂದ ಪದವೀಧರ ಕ್ಷೇತ್ರದಲ್ಲಿ ಸುತ್ತಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಅವರಿಗೂ ಸುನೀಲ ಅವರನ್ನು ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಆದರೆ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸುನೀಲ ಸಂಕ ಪ್ರಭಾವಿ ಅಲ್ಲ. ಎರಡೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಸಚಿವ ಮುರುಗೇಶ ನಿರಾಣಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಸಹೋದರ ಹನುಮಂತ ನಿರಾಣಿಯನ್ನು ಗೆಲ್ಲಿಸಲು ಪಣತೊಟ್ಟಿರುವ ಅವರು, ಮೂರು ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
ಚುನಾವಣೆಯಲ್ಲಿನ ಜಾತಿ ಲೆಕ್ಕಾಚಾರ : ಹಾಲಿ ಪರಿಷತ್ ಸದಸ್ಯರೂ ಆಗಿರುವ ಹನುಮಂತ ನಿರಾಣಿ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ನಿರಾಣಿ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಠಕ್ಕರ್ ಕೊಡಲೆಂದೇ ರಣತಂತ್ರ ರೂಪಿಸಿರುವ ಕಾಂಗ್ರೆಸ್ ಕೂಡ ಪಂಚಮಸಾಲಿ ಸಮಾಜದ ಸುನೀಲ ಸಂಕ ಅವರಿಗೆ ಟಿಕೆಟ್ ನೀಡಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಮತಗಳು ಅಧಿಕ ಪ್ರಮಾಣದಲ್ಲಿವೆ. ಈ ಕಾರಣಕ್ಕೆ ಉಭಯ ಪಕ್ಷಗಳು ಪಂಚಮಸಾಲಿ ಸಮಾಜಕ್ಕೆ ಮಣೆ ಹಾಕಿವೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಕಳೆದೊಂದು ವರ್ಷಗಳಿಂದ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸಚಿವರಾಗಿರುವ ಮುರುಗೇಶ ನಿರಾಣಿ ಕೂಡ ಮೀಸಲಾತಿ ಹೋರಾಟದಲ್ಲಾಗಲಿ, ಮೀಸಲಾತಿ ಕೊಡಿಸಲು ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರುತ್ತಿಲ್ಲ ಎಂಬ ಬೇಸರ ಪಂಚಮಸಾಲಿ ಸಮಾಜಕ್ಕಿದೆ. ಹೀಗಾಗಿ ಮೀಸಲಾತಿ ಹೋರಾಟ ಈ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.