ಬೆಳಗಾವಿ: ಸುಶಿಕ್ಷಿತ ಮತದಾರರೇ ಹೆಚ್ಚಿರುವ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಯು ಸದ್ಯ ಬಿಜೆಪಿ ವಶದಲ್ಲಿದ್ದು, ಕ್ಷೇತ್ರ ಮತ್ತೆ ವಶಕ್ಕೆ ಪಡೆಯಲು ಕೇಸರಿ ಪಡೆ ತೀವ್ರ ಕಸರತ್ತು ನಡೆಸುತ್ತಿದೆ. ಇದಕ್ಕೆ ತಡೆಯೊಡ್ಡಲು ಕಾಂಗ್ರೆಸ್, ಎಂಇಎಸ್ ಕೂಡ ರಣತಂತ್ರ ಹೆಣೆಯುತ್ತಿವೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಅನಿಲ ಬೆನಕೆ ಬದಲು ಡಾ. ರವಿ ಪಾಟೀಲ್ಗೆ ಬಿಜೆಪಿ ಟಿಕೆಟ್ ನೀಡಿದ್ದು, ಕಾಂಗ್ರೆಸ್ನಿಂದ ಮಾಜಿ ಶಾಸಕ ಫಿರೋಜ್ ಸೇಠ್ ಬದಲಾಗಿ ಅವರ ಸಹೋದರ ರಾಜು ಸೇಠ್ ಸ್ಪರ್ಧಿಸಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದಿಂದ ರಾಜಕುಮಾರ ಟೋಪಣ್ಣವರ, ಜೆಡಿಎಸ್ ಶಿವಾನಂದ ಮುಗಳಿಹಾಳ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರವೀಣ ಹಿರೇಮಠ, ಎಂಇಎಸ್ ಅಮರ ಯಳ್ಳೂರಕರ್, ಪ್ರಜಾಕೀಯ ಪ್ರೇಮ್ ಚೌಗುಲೆ ಅವರನ್ನು ಕಣಕ್ಕಿಳಿಸಿವೆ.
ಉತ್ತರ ಕ್ಷೇತ್ರದಲ್ಲಿ ಲಿಂಗಾಯತರು, ಮುಸ್ಲಿಂರು ಮತ್ತು ಮರಾಠರು ನಿರ್ಣಾಯಕ ಮತದಾರರು. ಕಳೆದ ಬಾರಿ ಮರಾಠ ಸಮುದಾಯದ ಅನಿಲ ಬೆನಕೆಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರಿಂದ ಮರಾಠ ಮತ್ತು ಲಿಂಗಾಯತರ ಮತಗಳು ಬಿಜೆಪಿಗೆ ಬಂದಿದ್ದರಿಂದ ಬೆನಕೆ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಹಾಲಿ ಶಾಸಕ ಅನಿಲ ಬೆನಕೆಗೆ ಟಿಕೆಟ್ ಸಿಗದಿರುವ ಹಿನ್ನೆಲೆ ಮರಾಠ ಮತಗಳು ಬಿಜೆಪಿಗೆ ಕೈತಪ್ಪುವ ಸಾಧ್ಯತೆಯಿದೆ. ಲಿಂಗಾಯತ ಮತಗಳ ಜೊತೆಗೆ ಮರಾಠ ಮತಗಳನ್ನು ಡಾ. ರವಿ ಪಾಟೀಲ್ ಎಷ್ಟರ ಮಟ್ಟಿಗೆ ಸೆಳೆಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರ ಆಗಲಿದೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ್ಗೆ ಮುಸ್ಲಿಂ ಮತಗಳು ಒಟ್ಟಾಗಿ ಬರುವ ಸಾಧ್ಯತೆ ಹೆಚ್ಚಿದ್ದು, ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ಗೆ ಪ್ಲಸ್ ಆಗುವುದರಿಂದ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರದ ಹಿನ್ನೆಲೆ:2008ರಲ್ಲಿ ರಚನೆಯಾಗಿರುವ ಬೆಳಗಾವಿ ಉತ್ತರ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫಿರೋಜ್ ಸೇಠ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2013ರಲ್ಲಿ ನಡೆದ ಚುನಾವಣೆಯಲ್ಲೂ ಫಿರೋಜ್ ಸೇಠ್ ಗೆದ್ದಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಫಿರೋಜ್ ಸೇಠ್ ಸೋಲಿಸಿ ಉತ್ತರ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಅನಿಲ್ ಬೆನಕೆ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು.
ಬಿಜೆಪಿ ವರ್ಸಸ್ ಕಾಂಗ್ರೆಸ್:ಸದ್ಯ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಎರ್ಪಟ್ಟಿದ್ದು, ಇನ್ನುಳಿದಂತೆ ಆಮ್ ಆದ್ಮಿ, ಜೆಡಿಎಸ್, ಎಂಇಎಸ್ ತಕ್ಕ ಮಟ್ಟಿಗೆ ಪೈಪೋಟಿ ನೀಡುತ್ತಿವೆ. ಡಾ. ರವಿ ಪಾಟೀಲ್ಗೆ ಅನಿಲ ಬೆನಕೆ ಬಲವಿದ್ದರೆ, ರಾಜು ಸೇಠ್ಗೆ ಸಹೋದರ ಮಾಜಿ ಶಾಸಕ ಫಿರೋಜ್ ಸೇಠ್ ಬಲವಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮನೆ ಮನೆ ಪ್ರಚಾರ ಮಾಡುತ್ತಿದ್ದು, ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕೂಡ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ಕ್ಷೇತ್ರದ ವಿಶೇಷತೆ:ಪ್ರತಿಷ್ಠಿತ ಕೆಎಲ್ಇ ಶಿಕ್ಷಣ ಸಂಸ್ಥೆ, ನಾಗನೂರು ರುದ್ರಾಕ್ಷಿಮಠ, ಕಿಲ್ಲಾ ಕೋಟೆ ಮತ್ತು ಕೆರೆ, ಕೋಟೆ ಆವರಣದ ಶ್ರೀ ದುರ್ಗಾದೇವಿ ಮಂದಿರ, ಐತಿಹಾಸಿಕ ಕಮಲಬಸ್ತಿ ಶಿಲ್ಪ ಮಂದಿರ, ರಾಮಕೃಷ್ಣ ಮಿಶನ್ ಆಶ್ರಮ, ಅಂಜುಮನ್ ಸಂಸ್ಥೆ ಇರುವುದು ಕೂಡ ಇದೇ ಉತ್ತರ ಕ್ಷೇತ್ರದಲ್ಲಿ.