ಬೈಲಹೊಂಗಲ/ಬೆಳಗಾವಿ:ಸಾಮಾಜಿಕ ಅಂತರದ ಕುರಿತು ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಜನರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ದಿನಸಿ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಗುಂಪು ಗುಂಪಾಗಿ ಮುಗಿಬೀಳುತ್ತಿದ್ದಾರೆ.
ಪಟ್ಟಣದ ಬಹುತೇಕ ದಿನಸಿ ಸೇರಿದಂತೆ ಇತರೆ ಅಂಗಡಿಗಳಲ್ಲಿಯೂ ಮಾಸ್ಕ್ಗಳನ್ನು ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದಿನಸಿ ಖರೀದಿ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು, ಪೊಲೀಸರು ಮಾತ್ರ ಇತ್ತ ಗಮನ ಹರಿಸದೇ ಇರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಸಾಮಾಜಿಕ ಅಂತರ ಮರೆತು ದಿನಸಿ ಖರೀದಿಗೆ ಮುಗಿಬಿದ್ದ ಜನತೆ ತಾಲೂಕಿನಲ್ಲಿ ಬೆಳಿಗ್ಗೆ 6ರಿಂದ 8ರವರೆಗೆ ಮಾತ್ರ ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳಲು ತಾಲೂಕು ಆಡಳಿತಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದು, ಬೆಳಿಗ್ಗೆಯಿಂದಲೇ ಜನಜಂಗುಳಿ ಹೆಚ್ಚಾಗುತ್ತಿದೆ. ಆದ್ರೆ, ಪೊಲೀಸರು ಬೆಳಿಗ್ಗೆ 10 ಘಂಟೆಯ ನಂತರ ಬರುತ್ತಾರೆ. ಒಂದು ವೇಳೆ ಅದಕ್ಕೂ ಮುಂಚೆ ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಯಾರೊಬ್ಬರಿಗೂ ತಿಳಿ ಹೇಳುವುದಿಲ್ಲವಂತೆ. ಅಧಿಕಾರಿಗಳು ದಿನಸಿ ತೆಗೆದುಕೊಳ್ಳಲು ನಿಗದಿ ಮಾಡಿದ ಅವಧಿ ಮುಗಿಯುವವರೆಗೂ ಪೊಲೀಸರು ಬಾರದೇ ನಂತರ ಅಂಗಡಿಗಳನ್ನು ಬಂದ್ ಮಾಡಿಸಲು ಮಾತ್ರ ಬರುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.
ದಿನಸಿ ತೆಗೆದುಕೊಳ್ಳಲು ಕೆಲವರು ಮುಖಗವಸು, ಟವೆಲ್‌ಗಳನ್ನು ರಕ್ಷಣೆಗಾಗಿ ಬಳಸಿದರೆ, ಮತ್ತೆ ಕೆಲವರು ಹಾಗೆಯೇ ಖರೀದಿಸುತ್ತಿದ್ದಾರೆ. ಜಿಲ್ಲಾಡಳಿತ ಎಷ್ಟೇ ಕ್ರಮ ಕೈಗೊಂಡರೂ ಜನರು ಮಾತ್ರ ಎಚ್ಚೆತ್ತಂತೆ ಕಾಣುತ್ತಿಲ್ಲ. ಸಾಮಾಜಿಕ ಅಂತರ ಮರೆತು ದಿನಸಿ ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರು ಬೆಳಿಗ್ಗೆ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಬಿಸಿ ಮುಟ್ಟಿಸಬೇಕಿದೆ.