ಗೋಕಾಕ್ (ಬೆಳಗಾವಿ) : ನಟ ಸುದೀಪ್ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ಮತ ಪಡೆದರೂ ಆಶ್ಚರ್ಯ ಪಡಬೇಕಿಲ್ಲ. ಇದು ಬಿಜೆಪಿ ತಂತ್ರಗಾರಿಕೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.
ಗೋಕಾಕ್ನಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಮತ ಗಳಿಸಲು ಏನು ಬೇಕಾದರೂ ತಂತ್ರಗಾರಿಕೆ ಮಾಡುತ್ತಾರೆ. ಅವರನ್ನು ಇಲ್ಲಿ ತಂದು, ಇವರನ್ನು ಅಲ್ಲಿ ತಂದು ಚೆಸ್ ಆಡಿದಂತೆ ಮಾಡುತ್ತಾರೆ. ಕಳೆದ ಬಾರಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ನಾಯಕರ ಮತ ಸೆಳೆಯಲು ಯಶಸ್ವಿಯಾದರು. ಚಾಕೊಲೇಟ್ ತೋರಿಸಿ, ಕೊನೆವರೆಗೂ ಉಪಮುಖ್ಯಮಂತ್ರಿ ಮಾಡಲಿಲ್ಲ. ಈಗ ಸುದೀಪ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಜನ ಸಾಮಾನ್ಯರು ತಿಳಿದುಕೊಳ್ಳಬೇಕು. ಗೆಲ್ಲಲು ಮಾತ್ರ ಸುದೀಪ್ ಅವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಎಚ್ಚರಿಸಿದರು.
ಕರ್ನಾಟಕ ಜನತೆ ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ: ಎಲ್ಲ ಸಮೀಕ್ಷೆಯಲ್ಲೂ ನಾವು ಮುಂದಿದ್ದೇವೆ. ಅನುಕೂಲಕರ ವಾತಾವರಣವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರದ ಬಗ್ಗೆ ಜನ ಬೇಜಾರಾಗಿದ್ದಾರೆ. ಹೀಗಾಗಿ ಈ ಬಾರಿ ಖಂಡಿತವಾಗಿ ಕರ್ನಾಟಕ ಜನತೆ ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದೀಪ್ ಗೊಂದಲದಲ್ಲಿದ್ದಾರೆ- ಸತೀಶ್ ಜಾರಕಿಹೊಳಿ: ಸುದೀಪ್ ಅವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲು, ದೇಶದಲ್ಲಿ ಪ್ರಚಾರ ಮಾಡಲು ಯಾವುದೇ ನಿರ್ಬಂಧ ಇಲ್ಲ. ಅದಕ್ಕೆ ಅವರು ಸ್ವತಂತ್ರರು. ಆದರೆ ಅವರು ಬರುವುದರಿಂದ ಎಲ್ಲವೂ ಸುಧಾರಣೆ ಆಗುತ್ತೆ ಎನ್ನುವುದು ಕೇವಲ ಕಲ್ಪನೆ ಅಷ್ಟೆ. ದೇಶ ಮತ್ತು ರಾಜ್ಯದಲ್ಲಿ ಸಮಸ್ಯೆಗಳು ಹಾಗೆ ಇವೆ. ಅವರು ಬರುವುದರಿಂದ ಎಲ್ಲವೂ ಪರಿಹಾರ ಆಗುವುದಿಲ್ಲ. ಮುಖ್ಯಮಂತ್ರಿಗಳು ಬಿಜೆಪಿ ಪರವಾಗಿ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಹೇಳಿದರೆ, ಸುದೀಪ್ ಕೆಲವೊಂದು ಕಡೆ, ಆತ್ಮೀಯರ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಒಟ್ಟಾರೆ ಸುದೀಪ್ ಗೊಂದಲದಲ್ಲಿದ್ದು, ಅವರು ಪ್ರಚಾರ ಮಾಡುವುದರಿಂದ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಅದು ಅವರಿಗೆ ನಷ್ಟ ಆಗಲಿದೆ. ಒಬ್ಬ ನಟನಾಗಿ, ಅವರಿಗೆ ಎಲ್ಲ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ. ಹೀಗಾಗಿ ಒಂದು ಪಕ್ಷದ ಪರವಾಗಿ ಹೋದರೆ, ಅವರ ನಟನೆಗೆ ತೊಂದರೆ ಆಗುತ್ತದೆ ಎಂದರು.