ಬೆಳಗಾವಿ : ಕಳೆದ ಒಂದೂವರೆ ದಶಕಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆ ಆದರೂ, ಜಾರಕಿಹೊಳಿ ಕುಟುಂಬ ಸದಸ್ಯರು ಸಚಿವರಾಗಿರುತ್ತಿದ್ದರು. ಅಷ್ಟರ ಮಟ್ಟಿಗೆ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಹೊಂದಿತ್ತು. ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾರಕಿಹೊಳಿ ಕುಟುಂಬವನ್ನೇ ಬಿಜೆಪಿ ಅಧಿಕಾರದಿಂದ ಹೊರಗಿಡುವ ಮೂಲಕ ಅಚ್ಚರಿ ಮೂಡಿಸಿದೆ.
2004ರಿಂದ 2019ರ ಮೈತ್ರಿ ಸರ್ಕಾರದವರೆಗೂ ಜಾರಕಿಹೊಳಿ ಸಹೋದರರು ಎಲ್ಲ ಸರ್ಕಾರಗಳಲ್ಲಿ ಮಂತ್ರಿ ಆಗಿದ್ದರು. ಇಂದು ರಚನೆಯಾದ ಬಿಜೆಪಿ ಸಂಪುಟದಲ್ಲಿ ಬಿಜೆಪಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಬಿಜೆಪಿ ಜಾರಕಿಹೊಳಿ ಕುಟುಂಬಕ್ಕೆ ಶಾಕ್ ನೀಡಿದೆ. ಒಂದೂವರೆ ದಶಕದ ಬಳಿಕ ಜಾರಕಿಹೊಳಿ ಕುಟುಂಬ ಅಧಿಕಾರದಿಂದ ದೂರ ಉಳಿದಂತಾಗಿದೆ.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ಧರಂಸಿಂಗ್ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ, ಬಳಿಕ ರಚನೆಯಾದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವವಹಿಸಿದ್ದ ಹೆಚ್‍ಡಿಕೆ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, 2009ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ನಂತರ ಇತ್ತೀಚೆಗೆ ಪತನಗೊಂಡ ಮೈತ್ರಿ ಸರ್ಕಾರದ ಆರಂಭದಲ್ಲಿ ರಮೇಶ ಜಾರಕಿಹೊಳಿ ನಂತರ ಸತೀಶ ಜಾರಕಿಹೊಳಿ ಮಂತ್ರಿ ಆಗಿದ್ದರು.
ಮೈತ್ರಿ ಸರ್ಕಾರ ಕೆಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಅವರೀಗ ಅನರ್ಹರಾಗಿದ್ದು, ಇವರ ಬದಲಿಗೆ ಬಾಲಚಂದ್ರ ಜಾರಕಿಹೊಳಿ ಮಂತ್ರಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳದೇ ಬಿಜೆಪಿ ಅಚ್ಚರಿ ಮೂಡಿಸಿದೆ.
ಅನರ್ಹಗೊಂಡಿರುವ ರಮೇಶ ಜಾರಕಿಹೊಳಿ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದ್ದು, ಅದರ ತೀರ್ಪು ಬರಬೇಕಿದೆ. ತೀರ್ಪು ಅನರ್ಹ ಶಾಸಕರ ಪರವಾಗಿ ಬಂದರಷ್ಟೇ ರಮೇಶ ಸಂಪುಟ ಸೇರುವುದು ಖಚಿತ ಎನ್ನಲಾಗುತ್ತಿದೆ. ಇಲ್ಲವಾದರೆ ತೀರ್ಪು ಅನರ್ಹ ಶಾಸಕರ ವಿರುದ್ಧ ಬಂದರೆ ನಂತರ ನಡೆಯುವ ಸಂಪುಟ ವಿಸ್ತರಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವರಾಗುವ ಅವಕಾಶ ದೊರೆಯುವ ಸಾಧ್ಯತೆ ಇದೆ. ಆದರೆ, ಅಲ್ಲಿಯವರೆಗೆ ಜಾರಕಿಹೊಳಿ ಕುಟುಂಬ ಅಧಿಕಾರದಿಂದ ದೂರು ಉಳಿಯುವುದು ಅನಿವಾರ್ಯ.