ಬೆಳಗಾವಿ : ಜನರ ಆಸೆ, ಬಯಕೆ, ನಾನು ಸಿಎಂ ಆಗಬೇಕು ಎನ್ನುವುದು ಇದ್ದೇ ಇರುತ್ತದೆ. ಆ ವಿಚಾರ ಆಮೇಲೆ, ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ್ಯದ ಜನರು ನಮಗೆ ಐದು ವರ್ಷ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೆಯೋ ಮಾಡಲಿ. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ರಾಜ್ಯದ ಜನರು ನಿರೀಕ್ಷೆ ಮಾಡಿದ ಹಾಗೆ ನಾವು ಆಡಳಿತ ನೀಡಬೇಕು. ಈ ವರ್ಷ ಮಳೆ ಕಡಿಮೆಯಾಗಿದೆ. ಒಂದು ದಿನ ಮಳೆ ಬರದಿದ್ದರೆ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ.
ಆದರೆ, ನಾವು ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡುತ್ತೇವೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಈ ಭಾಗದಲ್ಲಿ ಮಳೆ ಬರಲಿ, ಬಾರದೇ ಇರಲಿ ಮಲಪ್ರಭಾ ನದಿ ಒಂದು ಬಿಟ್ಟರೆ ಎಲ್ಲ ಜಲಾಶಯಗಳಲ್ಲಿ ಶೇ.90ಕ್ಕೂ ಅಧಿಕ ನೀರು ಸಂಗ್ರಹವಾಗಿದೆ. ಆದರೆ, ಹಳೆ ಮೈಸೂರು ಭಾಗದವರನ್ನು ದೇವರೆ ಕಾಪಾಡಬೇಕು ಎಂದರು.
ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಬದಲಾವಣೆ ತಂದಿದ್ದೇನೆ. ರೈತರಿಗೆ ಆರು ಗಂಟೆ ವಿದ್ಯುತ್ ಕೊಡುತ್ತಿದ್ದೆವು. ಆದರೆ, ಈಗ ನಮ್ಮ ಸರ್ಕಾರ ಮತ್ತೆ ಬಂದ ಮೇಲೆ ಏಳು ಗಂಟೆ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾವು ಮಾತನಾಡಿ ತೀರ್ಮಾನ ಮಾಡಿದ್ದೆವು ಎಂದರು.
ರಾಜ್ಯ ಸರ್ಕಾರಕ್ಕೆ ನೀರು ಉಳಿತಾಯ ಮಾಡುವುದೇ ದೊಡ್ಡ ಸವಾಲಾಗಿದೆ. ನೀರಾವರಿ ಬಳಕೆದಾರ ಸಂಘಗಳನ್ನು ಕ್ರಿಯಾಶೀಲ ಮಾಡಿದ್ದೇನೆ. ಎತ್ತಿನಹೊಳೆ ನೀರು ತರಲು ನಿಯಮ ಮಾಡಲಾಗಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುವರೆಗೂ ನೀರು ಹೋಗಬೇಕು. ಮಧ್ಯದಲ್ಲಿ ಯಾರಾದರೂ ಪೈಪ್ ಲೈನ್ ಹಾಕಿದರೆ ಕಷ್ಟವಾಗುತ್ತದೆ. ಅದಕ್ಕಾಗಿ ಕಾನೂನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಕೆಶಿ ಹೇಳಿದರು.