ಬೆಳಗಾವಿ :ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸಿನ ಬಿ ಟೀಂ ಎಂಬ ಸಚಿವ ಮುರಗೇಶ್ ನಿರಾಣಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಒತ್ತಡಕ್ಕೆ ಮಣಿದು ನಿರಾಣಿ ಅವರು ಈ ರೀತಿ ಆರೋಪ ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಕಳೆದ 27 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ನಡೆದ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತ ಎಂಬ ನಿರಾಣಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇದು ಸಮಾಜದ ಸಮಾವೇಶ, ಸಮಾಜದ ಕೆಲಸವಾಗಿದೆ. ಯಾವುದೇ ಪಕ್ಷಕ್ಕೆ ಅನುಕೂಲವಾಗಲಿ ಎಂದು ನಾವು ಹೋರಾಟ, ಸಮಾವೇಶ ಮಾಡುತ್ತಿಲ್ಲ ಎಂದರು.
ಓದಿ:ನನಗೆ ಯಾವ ಬುಲಾವೂ ಬಂದಿಲ್ಲ, ಬೇರೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ಯತ್ನಾಳ್ ಸ್ಪಷ್ಟನೆ
ಸಮಾಜದ ಯುವಕ-ಯುವತಿಯರಿಗೆ ಅನುಕೂಲ ಆಗಬೇಕೇಂಬ ಉದ್ದೇಶ ನಮ್ಮದಾಗಿದೆ. ಮುರಗೇಶ ನಿರಾಣಿ ಹಾಗೂ ಸಿ ಸಿ ಪಾಟೀಲ್ ಸಚಿವರಾಗಿದ್ದಾರೆ. ಈಗಾಗಲೇ ಸಿಎಂ ಕೂಡ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ವರದಿ ಪಡೆದು ಸಮಾಜಕ್ಕೆ ಸಹಾಯ ಮಾಡುವ ಕೆಲಸವನ್ನು ಇಬ್ಬರು ಸಚಿವರು ಮಾಡಬೇಕು.
ಮಾರ್ಚ್ 4ರ ನಂತರ ನಮ್ಮ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನವೇ 2ಎ ಮೀಸಲಾತಿ ಸಿಗುವ ರೀತಿ ಕೆಲಸ ಮಾಡಬೇಕು. ಇದಾದ ಬಳಿಕ ಓಬಿಸಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸು ಕೂಡ ಮಾಡಬೇಕು ಎಂದು ಆಗ್ರಹಿಸಿದ್ದಾರೆ.