ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನಿಂದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೈದಿ ಜಯೇಶ್ ಪೂಜಾರಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಬೆದರಿಕೆಗೆ ಪ್ರಚೋದನೆ ನೀಡಿದ ಆರೋಪದಡಿ ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರ ಅಫ್ಸರ್ ಪಾಷಾನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಹಿಂಡಲಗಾ ಜೈಲಿಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಅಫ್ಸರ್ ಪಾಷಾನನ್ನು ಇಡೀ ದಿನ ವಿಚಾರಣೆಗೆ ಒಳಪಡಿಸಿದ್ದರು. ನಂತರ ವಿಶೇಷ ವಿಮಾನದಲ್ಲಿ ಹೆಚ್ಚಿನ ವಿಚಾರಣೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆ ಪಾಷಾನನ್ನು ಕರೆದೊಯ್ದಿದ್ದಾರೆ.
ಇನ್ನು, ಹಿಂಡಲಗಾ ಜೈಲಿಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ರಾಜ್ಯ ಪೊಲೀಸ್ ಅಧಿಕಾರಿಗಳು ಕಾರಾಗೃಹದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಹೊರಗೆ ವಿವಿಧ ಅಪರಾಧ ಕೃತ್ಯದಲ್ಲಿ ತೊಡಗಿದವರನ್ನು ಹಿಡಿಯಲು ಪೊಲೀಸರು ಹರಹಾಸ ಪಡುತ್ತಾರೆ. ಕೊನೆಗೆ ವಿವಿಧ ಕಡೆಗಳಲ್ಲಿ ಕುಟುಂಬ, ಊರು ನಿದ್ರೆ, ಊಟವನ್ನೇ ಬಿಟ್ಟು ಆರೋಪಿಗಳ ಪತ್ತೆಗೆ ಅಲೆದಾಡಿ, ಕೊನೆಗೆ ಜೀವದ ಹಂಗು ತೊರೆದು ಆರೋಪಿಯನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಆದರೆ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೈಫಲ್ಯದಿಂದಾಗಿ ಕೈದಿಗಳ ಬಳಿ ಮೊಬೈಲ್, ಚಾರ್ಜರ್‌ಗಳು ಪತ್ತೆಯಾಗುತ್ತಿವೆ. ಕಾರಾಗೃಹದ ಸಿಬ್ಬಂದಿಯ ಎಡವಟ್ಟುಗಳಿಂದ ಇಂತಹ ಘಟನೆಗಳು ನಡೆಯುವಂತಾಗುತ್ತವೆ ಎಂದು ಹಿಂಡಲಗಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.